ಬೆಂಗಳೂರು : ವಿಧಾನಸಭೆಯಲ್ಲಿ ʼಇವನಮ್ಮವ ಇವ ನಮ್ಮವʼ ವಿಧೇಯಕ ಮಂಡಿಸಲಾಯಿತು. ಜಾತಿ ಶ್ರೇಣೀಕರಣ, ಸಂಪ್ರದಾಯಗಳ ಹೆಸರಿನಲ್ಲಿ ಹಿಂಸೆ ಮತ್ತು ಕಿರುಕುಳ ತಪ್ಪಿಸಲು ಮುಂದಾಗಿದೆ. ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದರೆ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿದೆ.
2026ನೇ ಸಾಲಿನ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿರುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ( ಇವ ನಮ್ಮವ ಇವ ನಮ್ಮವ )ವಿಧೇಯಕದ ಪ್ರಸ್ತಾವವನ್ನು ಮುಖ್ಯಮಂತ್ರಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಮಂಡಿಸಿದರು.
ಅಂತರ್ಜಾತಿ ವಿವಾಹ ಸಂದರ್ಭ ಕುಟುಂಬಸ್ಥರಿಂದ ತೀವ್ರ ಆಕ್ಷೇಪ, ಬಹಿಷ್ಕಾರ ಸೇರಿ ಕೆಲ ಪ್ರಕರಣಗಳಲ್ಲಿ ಕೊಲೆಯೂ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಅಂತರ್ಜಾತಿ ವಿವಾಹಿತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯವು ನಿರಂತರವಾಗಿ, ಅಂತರ್ಜಾತಿ ವಿವಾಹಗಳ ಮೂಲ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವವರ, ವಿಶೇಷವಾಗಿ ಯುವ ವಯಸ್ಕರ ವಿರುದ್ಧ ಮರ್ಯಾದೆಗೇಡು ಹತ್ಯೆಗಳನ್ನು ಒಳಗೊಂಡಂತೆ ಕ್ರೂರ ಸ್ವರೂಪದ ಹಿಂಸಾಚಾರಗಳು ವ್ಯಕ್ತವಾಗುತ್ತಿರುವುದು ಮುಂದುವರೆಯುತ್ತಿರುವುರಿಂದ ವಿಧೇಯಕದ ಅಗತ್ಯವಿರುತ್ತದೆ ಎಂದು ಒತ್ತಿ ಹೇಳಿದರು.
ವಿಧೇಯಕದ ಪ್ರಸ್ತಾವವು ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಸುಭದ್ರಗೊಳಿಸುವ ಭ್ರಾತೃತ್ವದ ತತ್ವವನ್ನು ಪ್ರತಿಪಾದಿಸುತ್ತದೆ ಹಾಗೂ ಈ ತತ್ವವು ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡಲು ಮತ್ತು ಅಂತರ್ಜಾತಿ ವಿವಾಹಗಳ ಮನ್ನಣೆ ಮತ್ತು ರಕ್ಷಣೆಯ ಮೂಲಕ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು, ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಉಪಬಂಧಿಸಲು ಮತ್ತು ಜಾತಿ ಆಧಾರಿತ ಅಪರಾಧಗಳನ್ನು ಪ್ರತಿಬಂಧಿಸಲು ಹಾಗೂ ನಿಷೇಧಿಸಲು ಈ ವಿಧೇಯಕ ಅತ್ಯಗತ್ಯ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು, ಅಂತರ್ಜಾತಿ ವಿವಾಹಕ್ಕೆ ಗೌರವವನ್ನು ನೀಡಲು, ವೈಯಕ್ತಿಯ ಆಯ್ಕೆಗಳಲ್ಲಿ ಬಲವಂತದ ಜಾತಿ ಆಧಾರಿತ ತಾರತಮ್ಯವನ್ನು ಪ್ರತಿಬಂಧಿಸಲು ಮತ್ತು ಅಂತರ್ಜಾತಿಯ ವಿವಾಹಗಳನ್ನು ವಿಧಿವತ್ತಾಗಿ ನೆರವೇರಿಸುವುದಕ್ಕೆ “ಇವ ನಮ್ಮವ ಇವ ನಮ್ಮವ ವೇದಿಕೆ”ಯನ್ನು ರಚಿಸಲು ಶಾಸನವನ್ನು ರಚಿಸುವುದು ಅಗತ್ಯವೆಂದು ಪರಿಗಣಿಸಿ ವಿಧೇಯಕದ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿ ವಿಧೇಯಕದ ಪ್ರಸ್ತಾವವನ್ನು ಅಂಗೀಕರಿಸುವಂತೆ ಕೋರಿದರು.
ಬಳಿಕ, ಸದರಿ ವಿಧೇಯಕದ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಇದರಿಂದ ಅಂತರ್ಜಾತಿ ವಿವಾಹಿತರಿಗೆ ಕಾನೂನಿನಡಿ ಸಹಾಐವೂ ಸಿಕ್ಕಂತಾಗಿದೆ.
ವಿಧೇಯಕದ ಪ್ರಮುಖ ಅಂಶಗಳು
ಅಂತರ್ಜಾತಿ ಮದುವೆಯಾದರೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ, ಸಂಬಂಧಿಸಿದ ಜೋಡಿ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರಹಾಕುವುದು ಕಾನೂನುಬಾಹಿರ. ಜಾತಿ, ಇಲ್ಲವೆ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಹೇರುವಂತಿಲ್ಲ. ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ, ಕುಟುಂಬದ ಆಸ್ತಿ, ದಂಡಹಾಕುವಂತಿಲ್ಲ, ಕೆಲಸಕ್ಕೆ ಅಡ್ಡಿ, ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧ. ಅಂರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ.
ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ, ವಿವಾಹಿತ ಜೋಡಿಗೆ ಹಿಂಸೆ, ಮಾನಸಿಕ ನಿಂದನೆ ಕಾನೂನುಬಾಹಿರ, ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಸರಿಯಲ್ಲ. ಮದುವೆಯಾದ ಜೋಡಿಯನ್ನ ಕಿಡ್ನ್ಯಾಪ್ ಮಾಡುವುದು, ಆರ್ಥಿಕ ಬಹಿಷ್ಕಾರ ಹಾಕುವುದು ಕಾನೂನುಬಾಹಿರ.
ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ. ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗ ಕೊಟ್ಟವರ ಮೇಲೆ ಒತ್ತಡ ಅಪರಾಧ. ಲೈಂಗಿಕ ಹಿಂಸೆ ನೀಡುವುದು, ಕಿರುಕುಳ ನೀಡುವುದು ಅಪರಾಧ. ಬಲವಂತದ ಗರ್ಭಪಾತ ಗರ್ಭಸ್ರಾವಕ್ಕೆ ಒತ್ತಡ ಹೇರುವುದು ಅಪರಾಧ ಎಂದು ವಿಧೇಯಕ ಹೇಳಲಿದೆ.

