ನವದೆಹಲಿ: ಕೆಫೆ ಕಾಫಿ ಡೇ ಮಾಲೀಕತ್ವದ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ವಿರುದ್ಧದ ದಿವಾಳಿ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಫೆ. 21ರ ಒಳಗೆ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಸೂಚನೆ ನೀಡಿತ್ತು. ಇದನ್ನು ಪಾಲಿಸಲು ವಿಫಲವಾಗಿರುವುದರಿಂದ ಕಂಪನಿ ವಿರುದ್ಧ ದಿವಾಳಿ ಪ್ರಕ್ರಿಯೆ ಪುನಾರಂಭಿಸಲಾಗಿದೆ.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLAT) ಚೆನ್ನೈ ಪೀಠವು, ಅಮಾನತುಗೊಂಡ ಮಂಡಳಿಯ ನಿರ್ದೇಶಕರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದೆ ಎಂದು ಕಾಫಿ ಡೇ ಕಳೆದ ವಾರ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿತ್ತು. ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಫೆಬ್ರುವರಿ 21, 2025 ರವರೆಗೆ ಮೇಲ್ಮನವಿ ವಿಲೇವಾರಿಯಾಗದ ಕಾರಣ, ಕಾಫಿ ಡೇ ಮೇಲಿನ ತಡೆಯಾಜ್ಞೆಯ ಕುರಿತು NCLAT ಹೊರಡಿಸಿದ ಆದೇಶವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಕಾಫಿ ಡೇ ಮೇಲಿನ ದಿವಾಳಿ ಪ್ರಕ್ರಿಯೆ ಪುನರಾರಂಭವಾಗಲಿದೆ ಎಂದು ಅದು ಹೇಳಿದೆ.
2024ರ ಆಗಸ್ಟ್ 8 ರಂದು, IDBI ಟ್ರಸ್ಟೀಶಿಪ್ ಸರ್ವೀಸಸ್ ಲಿಮಿಟೆಡ್ (IDBITSL) ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಪೀಠವು, ಸಾಲದಲ್ಲಿರುವ ಕಂಪನಿಯ ಕಾರ್ಯಾಚರಣೆಯನ್ನು ನೋಡಿಕೊಳ್ಳಲು ಮಧ್ಯಂತರ ಪರಿಹಾರ ವೃತ್ತಿಪರರನ್ನು (IRP) ನೇಮಿಸಿತ್ತು. ಕಾಫಿ ಡೇಯ ಅಮಾನತುಗೊಂಡ ಮಂಡಳಿಯು ಇದನ್ನು ಕೂಡಲೇ NCLAT ಮುಂದೆ ಪ್ರಶ್ನಿಸಿತ್ತು. ಆಗಸ್ಟ್ 14, 2024 ರಂದು ಕಾಫಿ ಡೇ ವಿರುದ್ದ ಪ್ರರಂಭಿಸಲಾದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ NCLT ತಡೆ ನೀಡಿತ್ತು. ಇದನ್ನು IDBITSL ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. 2025ರ ಫೆಬ್ರುವರಿ 21, 2025 ಮೊದಲು ಬಾಕಿ ಇರುವ ಮೇಲ್ಮನವಿಯನ್ನು ವಿಲೇವಾರಿ ಮಾಡುವಂತೆ ಸುಪ‍್ರೀಂ ಕೋರ್ಟ್, ಜನವರಿ 31 ರಂದು NCLAT ನ ಚೆನ್ನೈ ಪೀಠಕ್ಕೆ ನಿರ್ದೇಶಿಸಿತ್ತು.