ಇತ್ತೀಚೆಗೆ ಉದ್ಘಾಟನೆಗೊಂಡ ರಾಮಜನ್ಮಭೂಮಿಯ ಶ್ರೀರಾಮಮಂದಿರವಿರುವ ಅಯೋಧ್ಯೆಯಲ್ಲೇ ದೇಶದ ಅತಿದೊಡ್ಡ ಮಸೀದಿಯೊಂದು ನಿರ್ಮಾಣವಾಗುತ್ತಿದೆ! ಇದಕ್ಕೆ ಉತ್ತರಪ್ರದೇಶ ಸರಕಾರವೇ 5 ಎಕರೆ ಜಮೀನು ನೀಡಿದೆ!! ಈ ಮಸೀದಿ ನಿರ್ಮಾಣಕ್ಕೆ ಸಂಗ್ರಹಿಸಿದ ದೇಣಿಗೆಯ ಶೇ.40 ರಷ್ಟು ಪಾಲು ಹಿಂದೂಗಳಿಂದಲೇ ಸಂಗ್ರಹವಾಗಿದೆ!!!
ಹೌದು.. ರಾಮಮಂದಿರ ಉದ್ಘಾಟನೆಗೊಂಡ ಅಯೋಧ್ಯಾ ಜಿಲ್ಲೆಯ ರಾಮಮಂದಿರದಿಂದ ಕೇವಲ 22 ಕಿಮೀ ದೂರದ ಧನ್ನಿಪುರದಲ್ಲಿ, ಉತ್ತರ ಪ್ರದೇಶ ರಾಜ್ಯಸರಕಾರದ ಅಡಿ ಬರುವ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯು “ಮುಹಮ್ಮದ ಬಿನ್ ಅಬ್ದುಲ್ಹಾ ಮಸ್ಜಿದ್” ಹೆಸರಿನ ಈ ಜಗದ್ವಿಖ್ಯಾತ ಭವ್ಯ ಮಸೀದಿಯ ನಿರ್ಮಾಣಕ್ಕೆ 26 ಜನವರಿ 2021 ರಂದು ಚಾಲನೆ ನೀಡಿದೆ. ಮಸೀದಿ ನಿರ್ಮಾಣಕ್ಕೆ ಇಲ್ಲಿಯವರೆಗೆ ಸಂಗ್ರಹವಾದ ದೇಣಿಗೆಯಲ್ಲಿ ಶೇ. 40ರಷ್ಟು ಪಾಲು ಹಿಂದುಗಳದ್ದಾದರೆ ಶೆ.30 ರಷ್ಟು ಪಾಲು ಮುಸ್ಲಿಂ ಸಮುದಾಯದ್ದಾಗಿದೆ. ಇನ್ನುಳಿದ ಶೇ. 30ರಷ್ಟನ್ನು ವಕ್ಫ್ ಮಂಡಳಿ ಭರಿಸುತ್ತಿದೆ. ಈ ಮಸೀದಿಯಲ್ಲಿ ಜಗತ್ತಿನಲ್ಲೇ ಅತಿದೊಡ್ಡ ಖುರಾನ್ ಗ್ರಂಥವನ್ನು ಇಡಲಾಗುತ್ತಿದೆ. ಮಸೀದಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಶಾಲೆ, ಕಾಲೇಜು, ಲೈಬ್ರಿರಿ ಸೇರಿದಂತೆ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುತ್ತಿವೆ.
2019 ರ ನವೆಂಬರ್ ನಲ್ಲಿ ಬಾಬ್ರಿ ಮಸೀದಿ ವಿವಾದ ಬಗೆಹರಿಸಿದ ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ಎಂದು ಹೇಳಲಾಗುವ ಬಾಬ್ರಿ ಮಸೀದಿ ದ್ವಂಸಗೊಂಡ ಜಾಗದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು. ಪರಿಹಾರಾರ್ಥವಾಗಿ ಮಸೀದಿ ನಿರ್ಮಾಣಕ್ಕೆ ಪ್ರಮುಖವಾದ ಪ್ರದೇಶದಲ್ಲಿ ಸೂಕ್ತವಾದ 5 ಎಕರೆ ಜಮೀನನ್ನು ಉತ್ತರ ಪ್ರದೇಶ ಸರಕಾರ ನೀಡಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿದ ಸುಪ್ರೀಂ ನಿರ್ಮಾಣದ ಜವಾಬ್ದಾರಿ ಸರಕಾರದ್ದೇ ಎಂದು ತಿಳಿಸಿತು.
ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಈ ಮಸೀದಿಯು ಕೇವಲ ಧಾರ್ಮಿಕ ಸ್ಥಳವಾಗಿರದೆ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿರುವುದು ಆಶಾದಾಯಕ ಬೆಳವಣಿಗೆ. ದೇಶದಲ್ಲಿ ಮಂದಿರಗಳಿಗೆ ಬರವಿಲ್ಲ. ಪ್ರತಿದಿನವೂ ಒಂದಿಲ್ಲೊಂದು ಮಂದಿರ, ಮಸೀದಿಗಳು ನಿರ್ಮಾಣಗೊಂಡು ಪ್ರಾಣಪ್ರತಿಷ್ಠಾಪನೆಗೊಳ್ಳುತ್ತಲೇ ಇರುತ್ತವೆ. ಹೀಗಿರುವಾಗ ಬಹುಸಂಖ್ಯಾತ ಹಿಂದೂಗಳು ಆರಾಧಿಸುವ ಶ್ರೀರಾಮನ ಮಂದಿರವೊಂದರ ನಿರ್ಮಾಣ, ಅದರ ಉದ್ಘಾಟನೆಗೆ ಯಾರ ಅಡ್ಡಿಯೂ ಇರಲಿಲ್ಲ. ದೇಶದ ಸಂವಿಧಾನವೂ ಇದಕ್ಕೆ ಪೂರಕವಾದುದನ್ನೇ ಹೇಳುತ್ತದೆ. ಆದರೆ ಆಧುನಿಕ ಭಾರತದಲ್ಲಿ ಅಸಹಿಷ್ಣುತೆ, ದ್ವೇಷದ ಹುಟ್ಟು ಬೆಳವಣಿಗೆಗೆ ಸಾಕ್ಷಿಯಾದ “ಮಸೀದಿ ಕೆಡವಿ ಮಂದಿರ ನಿರ್ಮಾಣ” ಮಾಡುವ ಕಾರ್ಯ ದೇಶದ ಸಾಮರಸ್ಯ ಸಂಸ್ಕೃತಿಗೆ ವಿರುದ್ಧವಾದುದು ಎನ್ನುವುದು ಒಂದು ವರ್ಗದ ವಾದವಷ್ಟೆ.