ಭಾರತ ಮತ್ತು ಅಫಘಾನಿಸ್ತಾನ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2ರಿಂದ ರಾತ್ರಿ 11 ರವರೆಗೂ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಕಸ್ತೂರಿಬಾ ರೋಡ್, ಕ್ವೀನ್ಸ್ ರೋಡ್, ಮ್ಯೂಸಿಯಂ ರೋಡ್ ನೃಪತುಂಗ ರೋಡ್ ನಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಶಿವಾಜಿನಗರ್ ಬಸ್ ನಿಲ್ದಾಣ ಯುಬಿಸಿಟಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಹಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ.
ಮೆಟ್ರೋ ಸೇವೆ ವಿಸ್ತರಣೆ:
ಇಂದು ಭಾರತ – ಅಫ್ಘಾನಿಸ್ತಾನ ನಡುವಿನ ಟಿ-20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 11.45 ರವರೆಗೆ ಮೆಟ್ರೋ ಸೇವೆ ವಿಸ್ತರಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ತಿಳಿಸಿದೆ.
ನೇರಳೆ, ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆ ವಿಸ್ತರಿಸಲಾಗಿದ್ದು ಪಂದ್ಯ ನೋಡಲು ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ರಿಟರ್ನ್ ಜರ್ನಿ ಅವಕಾಶ ಕಲ್ಪಿಸಲಾಗಿದೆ ಮಧ್ಯಾಹ್ನ 2 ಗಂಟೆಯಿಂದ ಪೇಪರ್ ಟಿಕೇಟ್ ಮಾರಾಟ ನಡೆಯಲಿದೆ.
ಅಂತಿಮ ಹಣಾಹಣಿ:
ಭಾರತ ಮತ್ತು ಅಫಘಾನಿಸ್ತಾನ ತಂಡಗಳು ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡುತ್ತಿದ್ದು ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ.