ಭಾರತ-ಪಾಕ್‌ ಕದನ ವಿರಾಮ: ಟ್ರಂಪ್‌ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಕಾಂಗ್ರೆಸ್‌ ಆಗ್ರಹ

Most read

ನವದೆಹಲಿ: ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ತಾನೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್  ಅವರು ಎಕ್ಸ್‌ ಮೂಲಕ ಈ ಆಗ್ರಹ ಮಾಡಿದ್ದು, ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳಿರುವ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.  66 ದಿನಗಳಲ್ಲಿ 23 ಬಾರಿ ಟ್ರಂಪ್‌ ತಮ್ಮ ಹೇ:ಳಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಜುಲೈ 21 ರಿಂದ ಸಂಸತ್‌ ಅಧಿವೇಶನ ಆರಂಭವಾಗಲಿದೆ. ಟ್ರಂಪ್‌ ಅವರ ಹೇಳಿಕೆ ಕುರಿತು ಪ್ರಧಾನಿ ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸ್ಪಷ್ಟ ಉತ್ತರ ನೀಡಲೇಬೇಕಾಗಿದೆ. ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಜಾರಿ ಕುರಿತು ಟ್ರಂಪ್ ಹೇಳಿಕೆ ಕುರಿತು ವಾಸ್ತವಾಂಶವನ್ನು ದೇಶದ ಜನತೆ ತಿಳಿದುಕೊಳ್ಳಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರು ಸೋಮವಾರವೂ ಪರಮಾಣು ಯುದ್ಧವಾಗಿ ಬದಲಾಗಬಹುದಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರದ ಮೂಲಕ ನಿಲ್ಲಿಸಿದ್ದೇವೆ ಎಂದು ಹೇಳಿದ್ದರು..

ಆದರೆ ಭಾರತ ಎರಡು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರತಿಪಾದಿಸುತ್ತಿದೆ.

ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರು 26 ನಾಗರಿಕರನ್ನು ಕೊಂದು ಹಾಕಿದ್ದರು. ಈ ಊಗ್ರರಿಗೆ ಪಾಕ್‌ ಬೆಂಬಲ ನೀಡುತ್ತಾ ಬಂದಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆ ನಡೆಸಿತ್ತು. ಸತತ ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷಕ್ಕೆ ಅಂತ್ಯ ಹಾಡಲು  ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮ ಜಾರಿಗೆ ಒಪ್ಪಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

More articles

Latest article