ಭಾರತ–ಪಾಕ್ ಸಂಘರ್ಷ: 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೊಸ ಮಾಹಿತಿ  ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್

Most read

ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದನಾ ದಾಳಿ ನಂತರ  ಭಾರತಪಾಕಿಸ್ತಾನ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ  ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಕದನ ವಿರಾಮ ಘೋಷಣೆ ಬಳಿಕ ಪರಿಸ್ಧಿತಿ ತಿಳಿಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಆದರೆ, ಹೊಡೆದುರುಳಿಸಲಾಗಿರುವ ಯುದ್ಧ ವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂದು ಅವರು ನಿಖರವಾಗಿ ಹೇಳಿಲ್ಲ.

ಶ್ವೇತಭವನದಲ್ಲಿ ರಿಪಬ್ಲಿಕನ್‌ ಪಕ್ಷದ ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾತನಾಡುತ್ತಾ  ಟ್ರಂಪ್‌ ಈ ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ವಾಸ್ತವವಾಗಿ, ಹಾರಾಟದ ಸಂದರ್ಭದಲ್ಲೇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ನಾಲ್ಕು ಅಥವಾ ಐದು ಇರಬಹುದು. ಆದರೆ, ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಹೆಚ್ಚಿನ ವಿವರ ನೀಡಲಿಲ್ಲ ಮತ್ತು ಯಾವ ದೇಶಕ್ಕೆ ಸೇರಿದ ವಿಮಾನಗಳು ಎಂದು ತಿಳಿಸಿಲ್ಲ.

ಏಪ್ರಿಲ್‌ 22ರಂದು ಪಹಲ್ಗಾಮ್‌ ನಲ್ಲಿ  ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆದಿತ್ತು. ಉಗ್ರರು ನಡೆಸಿದ ದಾಳಿಗೆ  26 ಪ್ರವಾಸಿಗರು ಹತ್ಯೆಯಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದವು.

ಪ್ರತಿಯಾಗಿ ಪಾಕಿಸ್ತಾನ ಸೇನೆ ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಶೆಲ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಭಾರತ ಪಾಕಿಸ್ತಾನ ಸೇನೆಯನ್ನು  ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಯುದ್ಧದ ಆತಂಕ ಸೃಷ್ಟಿಯಾಗಿತ್ತು.

ಈ ಹಿಂದೆ ಭಾರತದ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಉಭಯ ದೇಶಗಳ ನಡುವೆ ಮೇ 10ರಂದು ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದು, ಈ ಒಪ್ಪಂದವನ್ನು ಮೊದಲು ಘೋಷಣೆ ಮಾಡಿದ್ದೇ ಟ್ರಂಪ್‌.

ಆದರೆ ಭಾರತ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿದೆಯಾದರೂ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತಪ್ಪಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್‌ ಸುಮಾರು 15ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಈ ವಿಷಯ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಪಡಿಸುತ್ತಿದೆಯಾದರೂ ಪ್ರಧಾನಿ ಮೋದಿ ಮಾತ್ರ ತುಟಿ ಬಿಚ್ಚಿಲ್ಲ.

More articles

Latest article