ಗಯಾನಾ: 2022ರ ಸೇಡು ತೀರಿತು. ಭಾರತ ಫೈನಲ್ ತಲುಪಿತು. ಇಂಗ್ಲೆಂಡ್ ತಂಡ 2022ರಲ್ಲಿ ಭಾರತವನ್ನು ಹೇಗೆ ಸೋಲಿಸಿತ್ತೋ ಅದೇ ರೀತಿ ಭಾರತ ತಂಡ ಈ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. 68 ರನ್ ಗಳ ಭರ್ಜರಿ ಗೆಲುವು ಭಾರತದ್ದಾಯಿತು.
ಭಾರತ 2022ರ ಟಿ-20 ವಿಶ್ವಕಪ್ ಗೆಲ್ಲಲು ಈಗ ಉಳಿದಿರುವುದು ಒಂದೇ ಪಂದ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಶನಿವಾರ ಪ್ರಶಸ್ತಿಗಾಗಿ ಸೆಣಸಲಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 172ರನ್ ಗಳ ಗುರಿ ನೀಡಿತ್ತು. ಸ್ಪಿನ್ನರ್ ಗಳಿಗೆ ಅನುಕೂಲಕರವಾದ, ಬೌನ್ಸ್ ಇಲ್ಲದ, ಸ್ಕಿಡ್ ಆಗುತ್ತಿದ್ದ ಪಿಚ್ ನಲ್ಲಿ ಭಾರತದ ಬಲಿಷ್ಠ ಬೌಲಿಂಗ್ ಪಡೆಯನ್ನು ಎದುರಿಸುವುದು ಇಂಗ್ಲೆಂಡ್ ಗೆ ತ್ರಾಸದಾಯಕವಾಗಿತ್ತು. ಪವರ್ ಪ್ಲೇನಲ್ಲಿ ಬೌಲ್ ಮಾಡಲು ಬಂದ ಅಕ್ಷರ್ ಪಟೇಲ್ ಒಂದರ ಮೇಲೆ ಒಂದು ಆಘಾತ ನೀಡಿದರು. ಅಪಾಯಕಾರಿ ಆಟಗಾರರಾದ ಜೋಸ್ ಬಟ್ಲರ್, ಮೋಯಿನ್ ಅಲಿ, ಜಾನಿ ಬೇರ್ ಸ್ಟೋ ಸಾಲುಸಾಲಾಗಿ ಅಕ್ಷರ್ ಪಟೇಲ್ ಗೆ ಔಟಾದರು. ಮತ್ತೊಂದೆಡೆ ಜಸ್ಪೀತ್ ಬುಮ್ರಾ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡಿದರು.
ನಂತರ ಬೌಲ್ ಮಾಡಲು ಬಂದ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡ ಸುಧಾರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. ಸ್ಯಾಮ್ ಕರನ್, ಹ್ಯಾರಿ ಬ್ರೂಕ್, ಜೋರ್ಡಾನ್ ಅವರುಗಳನ್ನು ಪೆವಿಲಿಯನ್ ಗೆ ಕಳಿಸಿದರು. ಲಿವಿಂಗ್ ಸ್ಟೋನ್ ಮತ್ತು ಆದಿಲ್ ರಶೀದ್ ರನ್ ಔಟ್ ಆಗಿ ಔಟಾದರು. ಕೊನೆಯಲ್ಲಿ 21 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಬಲೆಗೆ ಬಿದ್ದ ಜೋಫ್ರಾ ಆರ್ಚರ್ ಔಟಾಗುವುದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಮುಕ್ತಾಯವಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ಆರಂಭದಲ್ಲೇ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂಥ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ ರೋಹಿತ್ ಶರ್ಮಾ ಮತ್ರೆ ನಾಯಕನ ಆಟ ಆಡಿದರು. ಮತ್ತೊಂದೆಡೆ ಬ್ಯಾಟಿಂಗ್ ಗೆ ಕಷ್ಟವಾಗಿದ್ದ ಪಿಚ್ ನಲ್ಲೂ ಸೂರ್ಯಕುಮಾರ್ ಯಾದವ್ ಮಿಂಚಿದರು.
ರೋಹಿತ್ ಶರ್ಮಾ (57), ಸೂರ್ಯಕುಮಾರ್ ಯಾದವ್ (47) ಒಬ್ಬರಾದ ಮೇಲೊಬ್ಬರು ಔಟಾದಾಗ ಭಾರತ ಪಾಳಯದಲ್ಲಿ ಆತಂಕ ಕಾಣಿಸಿಕೊಂಡಿತ್ತು. ಆದರೆ ಹಾರ್ದಿಕ್ ಪಾಂಡ್ಯ ( 23), ರವೀಂದ್ರ ಜಡೇಜಾ ( 17) ಮತ್ತು ಅಕ್ಷರ್ ಪಟೇಲ್ (10) ಭಾರತದ ಇನ್ನಿಂಗ್ಸ್ ಹಿಗ್ಗಿಸಿದರು. ಕೊನೆಯಲ್ಲಿ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಫೈನಲ್ ಪಂದ್ಯವನ್ನು ಆಡಲಿವೆ.