ಬೆಂಗಳೂರು: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್, ಬಟಾಣಿ ಹಾಗೂ ಕಲ್ಲಂಗಡಿಗೆ ಬಳಸುವ ಕೃತಕ ಬಣ್ಣದಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾದ ಬೆನ್ನಲ್ಲೇ ಟೊಮೆಟೊ ಸಾಸ್ ನಲ್ಲೂ ರಾಸಾಯನಿಕ ಪತ್ತೆಯಾಗಿದೆ.
ಪ್ರಯೋಗಾಲಯ ಪರೀಕ್ಷೆಯಲ್ಲಿ ಟೊಮೆಟೊ ಸಾಸ್ ತಯಾರಿಕೆಗೆ ಅಪಾಯಕಾರಿ ರಾಸಾಯನಿಕ ಬಳಸುತ್ತಿರುವುದು ದೃಢವಾಗಿದೆ. ಟೊಮೆಟೊ ಸಾಸ್ ನಲ್ಲೂ ರಾಸಾಯನಿಕ ಇದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಅಧಿಕಾರಿಗಳು ಸಾಸ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸಾಸ್ ನಲ್ಲೂ ರಾಸಾಯನಿಕ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಟೊಮೆಟೊ ಸಾಸ್ ಮಾದರಿಗಳಲ್ಲಿ ಸೋಡಿಯಂ ಬೆಂಜೊಯೆಟ್ ಎನ್ನುವ ಹಾನಿಕಾರಕ ರಾಸಾಯನಿಕವನ್ನು ಬಳಸಿರುವುದು ಕಂಡು ಬಂದಿದ್ದು, ಇದರಲ್ಲಿ ಉಪ್ಪಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಟೊಮೆಟೊ ಸಾಸ್ ನೋಡಲು ಚೆನ್ನಾಗಿ ಕಾಣಿಸಲು ಮತ್ತು ಕೆಂಪು ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತದೆ. ಈ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಮೆಟೊ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಇದರಿಂದ ರಕ್ತದೊತ್ತಡ ಅಧಿಕವಾಗುತ್ತದೆ, ನಿಶ್ಯಕ್ತಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಮತ್ತು ಶಾಂತ ಮನಸ್ಥಿತಿ ಕಡಿಮೆಯಾಗುತ್ತದೆ. ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿದುಬಂದಿದೆ.