ಕುಂಭಮೇಳ ಪ್ರವಾಸದ  ಹೆಸರಿನಲ್ಲಿ ರೂ. 70 ಲಕ್ಷ ವಂಚನೆ; ಆರೋಪಿ ಹಣ ಕಳೆದಿದ್ದಾದರೂ ಹೇಗೆ?

Most read


ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರವಾಸ ಆಯೋಜಿಸಿರುವುದಾಗಿ ಜಾಹೀರಾತು ನೀಡಿ ಸುಮಾರು 100 ಕ್ಕೂ  ಹೆಚ್ಚು ಹಿರಿಯ ನಾಗರೀಕರಿಗೆ ರೂ. 70 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಆರೋಪಿಯಬ್ಬನನ್ನು ಪೊಲೀಸರು
ಬಂಧಿಸಿದ್ದಾರೆ. ಈ ಹಣವನ್ನೆಲ್ಲವನ್ನೂ ಆರೋಪಿ ರಾಘವೇಂದ್ರ ರಾವ್‌ ಆನ್‌ ಲೈನ್‌ ಬೆಟ್ಟಿಂಗ್‌ ನಲ್ಲಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಚಾನೆಲ್‌ ವೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ  ರಾಘವೇಂದ್ರ ಇತ್ತೀಚೆಗಷ್ಟೇ ಪ್ರವಾಸೋದ್ಯಮ ವ್ಯವಹಾರ ಆರಂಭಿಸಿದ್ದ. ಫೇಸ್‌ ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯಾ, ವಾರಣಾಸಿ, ಪ್ರಯಾಗ್‌ ರಾಜ್‌ ಮತ್ತಿತರ ಧಾರ್ಮಿಕ
ಸ್ಥಳಗಳಿಗೆ 7 ದಿನಗಳ ಪ್ರವಾಸ ಆಯೋಜಿಸಿರುವುದಾಗಿ ಪ್ರಚಾರ ಮಾಡಿದ್ದ. ಆರಂಭದಲ್ಲಿ ಒಂದೆರಡು ಬಾರಿ ಪ್ರವಾಸಿಗರನ್ನು ಕುಂಭಮೇಳಕ್ಕೆ ಕರೆದೊಯ್ದಿದ್ದ ಆರೋಪಿ ರಾಘವೇಂದ್ರ ಅಲ್ಲಿನ ಭಾವಚಿತ್ರಗಳನ್ನು ದಿನನಿತ್ಯ ಹಂಚಿಕೊಳ್ಳುತ್ತಿದ್ದ. ಈ ಮಾಹಿತಿಯನ್ನು ನಂಬಿದ
ಹಲವಾರು ಹಿರಿಯ ನಾಗರೀಕರು ಆರೋಪಿ ರಾಘವೇಂದ್ರನಿಗೆ ಹಣ ವರ್ಗಾವಣೆ ಮಾಡಿದ್ದರು

ಗೋವಿಂದಾಜನಗರ ಪೊಲೀಸ್‌ ಠಾಣೆಯೊಂದರಲ್ಲೇ ಹಣ ಕಳೆದುಕೊಂಡ ಸುಮಾರು 21 ಮಂದಿ ದೂರು ದಾಖಲಿಸಿದ್ದಾರೆ. ಏಳು ದಿನಗಳ ಪ್ರವಾಸಕ್ಕೆ ರಾಘವೇಂದ್ರ ರಾವ್‌ 49,000  ರೂ. ಶುಲ್ಕ ವಿಧಿಸುತ್ತಿದ್ದ. ವಿಮಾನದ ಟಿಕೆಟ್‌ ಗಳನ್ನು ಪ್ರವಾಸಿಗರಿಗೆ ಕಳುಹಿಸಿ ನಂತರ
ರದ್ದುಗೊಳಿಸುತ್ತಿದ್ದ. ಕೆಲವೊಂದು ಬಾರಿ ರಿಟರ್ನ್‌ ಟಿಕೆಟ್‌ ಗಳನ್ನು ರದ್ದುಗೊಳಿಸಿದ್ದು, ಪ್ರವಾಸಿಗರು ತೊಂದರೆ ಅನುಭವಿಸಿದ್ದರು. ನಂತರ ಆತ ಮೊಬೈಲ್‌ ಪೋನ್‌ ಸ್ವಿಚ್‌ ಆಫ್‌ ಮಾಡಿಕೊಳ್ಳುತ್ತಿದ್ದ  ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಆತನ ಮೊಬೈಲ್‌ ಫೋನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ರಾಘವೇಂದ್ರ ಮೂರು ಆನ್‌ ಲೈನ್‌ ಬೆಟ್ಟಿಂಗ್‌ ಆಪ್‌ ಗಳನ್ನು ಡೌನ್‌ ಲೋಡ್‌ ಮಾಡಿಕೊಂಡಿದ್ದ. ಹಿರಿಯ ನಾಗರೀಕರಿಂದ ಸಂಗ್ರಹಿಸಿದ ಹಣವನ್ನು ಈ ಆಪ್‌ ಗಳಲ್ಲಿ ಕಳೆದುಕೊಂಡಿದ್ದ. 68  ವರ್ಷದ
ಆತನ ತಾಯಿಗೆ ಈ ಯಾವ ವಿಷಯವೂ ತಿಳಿದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

More articles

Latest article