ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ವಾಣಿಜ್ಯ ಕಟ್ಟಡವೊಂದಕ್ಕೆ ಲಘು ವಿಮಾನ ಡಿಕ್ಕಿಯಾಗಿದ್ದು, ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. . ಲಾಸ್ ಏಂಜಲೀಸ್ನಿಂದ ಆಗ್ನೇಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ಲೆರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಸಮೀಪ ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೀಠೋಪಕರಣ ತಯಾರಿಕಾ ಕಂಪನಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದ್ದು, ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಹತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಲ್ಲರ್ಟನ್ ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಮತ್ತು ಮೃತಪಟ್ಟಿರುವವರು ವಿಮಾನದಲ್ಲಿದ್ದವರೇ ಅಥವಾ ಘಟನಾ ಸ್ಥಳದಲ್ಲಿ ಇದ್ದವರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತಕ್ಕೀಡಾದ ವಿಮಾನ ‘Van’s RV-10’ ಎಂದು ತಿಳಿಸಿರುವ ಫೆಡರಲ್ ವಿಮಾನಯಾನ ಅಧಿಕಾರಿಗಳು, ಘಟನೆ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ. ಕಳೆದ ವಾರವಷ್ಟೇ, ದಕ್ಷಿಣ ಕೊರಿಯಾದ ಮುವಾನ್ ಅಂತರರಾಷ್ಟ್ರೀಯ ವಿಮಾನದಲ್ಲಿ ಭಾರಿ ದುರಂತ ಸಂಭವಿಸಿತ್ತು. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಿಂದ ಬಂದಿದ್ದ ವಿಮಾನ, ಲ್ಯಾಂಡಿಂಗ್ ವೇಳೆ ರನ್ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿತ್ತು. ವಿಮಾನದಲ್ಲಿದ್ದ 181 ಮಂದಿಯ ಪೈಕಿ, 179 ಜನರು ಮೃತಪಟ್ಟಿದ್ದರು.