ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ) ಬೆಂಗಳೂರು ವಿಭಾಗವು 2025ರಲ್ಲಿ ಕರ್ನಾಟಕದಲ್ಲಿ 270 ಕೋಟಿ ರೂ. ಮೌಲ್ಯದ ಸುಮಾರು 490 ಕೆ.ಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಭರ್ಜರಿ ಬೇಟೆಯಾಡಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 2025ರಲ್ಲಿ ವರ್ಷದ ಅವಧಿಯಲ್ಲಿ 30 ಪ್ರಕರಣಗಳು ದಾಖಲಿಸಿಕೊಳ್ಳಲಾಗಿದ್ದು, 7 ವಿದೇಶಿ ಪ್ರಜೆಗಳು ಸೇರಿ 81 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೊಕೇನ್ (2 ಕೆಜಿ), ಗಾಂಜಾ (63 ಕೆಜಿ), ಹೈಡ್ರೋಪೋನಿಕ್ ಗಾಂಜಾ (244 ಕೆಜಿ), ಮೆಥಾಂಫೆಟಮೈನ್ (10.5 ಕೆಜಿ), ಸೈಲೋಸಿಬಿನ್ (6 ಕೆಜಿ), ಖಾಟ್ ಎಲೆಗಳು (162.5 ಕೆಜಿ), 808 ಎಲ್‌ಎಸ್‌ಡಿ ಬ್ಲಾಟ್ ಗಳು, ಎಂಡಿಎಂಎ 53 ಯೂನಿಟ್ ಮತ್ತು ಇತರ ನಿಷೇಧಿತ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಡ್ರಗ್ಸ್ ನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ರೂ.270 ಕೋಟಿ ಎಂದೂ ಮಾಹಿತಿ ನೀಡಿದೆ. ಬಂಧಿತರಲ್ಲಿ ಪ್ರಮುಖ ಕಳ್ಳಸಾಗಣೆದಾರರು, ಪೂರೈಕೆದಾರರು,ಗ್ರಾಹಕರು ಮತ್ತು ಕಿಂಗ್ ಪಿನ್ ಗಳನ್ನು ಬಂಧಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಡ್ರಗ್ಸ್ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದ್ದು, ನಂತರ ಪೂರೈಕೆದಾರರು, ಗ್ರಾಹಕರು ಮತ್ತು ಮಧ್ಯವರ್ತಿಗಳನ್ನು ಸೆರೆ ಹಿಡಿಯಲಾಗಿದೆ.

