ಗದಗ : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗದಲ್ಲಿ ಉದ್ಘಾಟಿಸಿದ “ಪ್ರಭುವಿನೆಡೆಗೆ ಪ್ರಭುತ್ವ” ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮ ಹೇಗೆ ಕಾರ್ಯ ನಿರ್ವಹಿಸಲಿದೆ ಎಂದರೆ:
ದಿ: 15-08-2025 ರ ಸ್ವಾತಂತ್ರೋತ್ಸವ ದಿನದಂದು ಜಿಲ್ಲೆಯ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಭುವಿನಡೆಗೆ “ಪ್ರಭುತ್ವ” ವಿನೂತನ ತಂತ್ರಾಂಶದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಯಿತು.
ಈ ಕಾರ್ಯಕ್ರಮವು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಸಚಿವ ಎಚ್. ಕೆ. ಪಾಟೀಲ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಈ ಪರಿಕಲ್ಪನೆ ರಾಜ್ಯದಲ್ಲಿಯೇ ವಿನೂತನವಾಗಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಈ ವಿನೂತನ ತಂತ್ರಾಂಶದ ಸಹಾಯದಿಂದ ರಚಿತವಾದ ಪ್ರ.ಪ್ರ. ಯಂತ್ರಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸಾರ್ವಜನಿಕರು ದಿನದ 24 ಗಂಟೆಗಳ ಕಾಲನ ಜಿಲ್ಲೆಯಲ್ಲಿ ಸ್ಥಾಪಿಸಲಾದ ಪ್ರ.ಪ್ರ. ‘ಯಂತ್ರದ ಮುಂದೆ ನಿಂತು ಪ್ರ. ಪ್ರ. ದೂರು ಬಟನ್ ಒತ್ತಿ ತಮ್ಮ ಸಮಸ್ಯೆಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆರಂಭಿಕವಾಗಿ ಸಾರ್ವಜನಿಕರು, 10 ಅಂಶಗಳನ್ನು ಒಳಗೊಂಡ ದೂರಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಾರಂಭಿಕವಾಗಿ ಗದಗ-ಬೆಟಗೇರಿ ನಗರದಲ್ಲಿ 03 ಪ್ರ.ಪ್ರ. ಯಂತ್ರಗಳನ್ನು ಸ್ಥಾಪಿಸಲಾಗಿರುತ್ತದೆ.
ಈ ಕಾರ್ಯಕ್ರಮದಡಿ ದಿ. 04-09-2025 ರಂದು ಲಕ್ಷ್ಮವ್ವ ಕೋಂ ಧರಮಪ್ಪ ಹೊಸಮನಿ, ಸಾ|| ಗದಗ ಇವರ ಪತಿ ತೀರಿಹೋಗಿ ಒಂದು ತಿಂಗಳೊಳಗಾಗಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಅರ್ಜಿ ಹಾಕಿದ್ದು, ಸದರಿ ಅರ್ಜಿ ತಿರಸ್ಕೃತಗೊಂಡಿರುವುದರಿಂದ ಸರಕಾರದಿಂದ ಸಿಗಬೇಕಾದ ಪರಿಹಾರ ಬಂದಿರುವುದಿಲ್ಲವೆಂದು ಪ್ರ.ಪ್ರ. ಯಂತ್ರದ ಮೂಲಕ ದೂರು ಸಲ್ಲಿಸಿರುತ್ತಾರೆ.
ದೂರಿನ ಕುರಿತಂತೆ ಪರಿಶೀಲಿಸಲಾಗಿ, ದಿ.17-04-2025 ರಂದು ಅರ್ಜಿದಾರರು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಮಂಜೂರಾತಿಗಾಗಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ್ದು ಕಂಡು ಬಂದಿತು. ಸದರಿ ಅರ್ಜಿಗೆ ಕುರಿತಂತ ಅರ್ಜಿಯೊಂದಿಗೆ ಮೃತರ ವಯಸ್ಸಿನ ದಾಖಲೆ ಮತ್ತು ಮರಣ ದಾಖಲೆ ಸಲ್ಲಿಸದೇ ಇದ್ದ ಪ್ರಯುಕ್ತ ಗದಗ ತಾಲ್ಲೂಕಿನ ತಹಶೀಲ್ದಾರ ಕಚೇರಿಯ ಯೋಜನೆಯ ಮಂಜೂರಾತಿ ಅಧಿಕಾರಿಯು ಅರ್ಜಿದಾರರಿಗೆ ದೂರವಾಣಿ ಮುಖಾಂತರ ಹಾಗೂ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ದಾಖಲೆಗಳನ್ನು ಸಂಗ್ರಹಿಸಲು ಪ್ರಯತ್ನಿಸಿದಾಗ, ಅರ್ಜಿದಾರರು ಲಭ್ಯವಾಗದೇ ಇರುವ ಪ್ರಯುಕ್ತ ಹಾಗೂ ಸಕಾಲ ಅವಧಿ ಮೀರುವುದರಿಂದ ದಿ:21-04-2025 ರಂದು ಸಂಪೂರ್ಣ ದಾಖಲೆಗಳೊಂದಿಗೆ ಪುನಃ ಅರ್ಜಿ ಸಲ್ಲಿಸಲು ತಿಳಿಸುವ ಷರಾದೊಂದಿಗೆ ತಿರಸ್ಕಾರ ಮಾಡಿರುತ್ತಾರೆ.
ಅರ್ಜಿದಾರರು ತಮ್ಮ ಪತಿ ಮೃತ ಹೊಂದಿದ ದಿನಾಂಕದಿಂದ 06 ತಿಂಗಳೊಳಗಾಗಿ ಪುನ: ಅರ್ಜಿ ಸಲ್ಲಿಸದೇ ಅವಧಿ ಮುಗಿದ ನಂತರ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದಾಗ ಅವಕಾಶ ಇಲ್ಲದ ಪ್ರಯುಕ್ತ ತಂತ್ರಾಂಶ ಅವಕಾಶ ಮಾಡಿಕೊಟ್ಟಿರುವುದಿಲ್ಲ.
ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಾಗ ತುರ್ತಾಗಿ ಸಮಸ್ಯೆಯನ್ನು ‘ಇತ್ಯರ್ಥಗೊಳಿಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ಬೆಂಗಳೂರು ಇವರನ್ನು ಸಂಪರ್ಕಿಸಿ ಪುನಃ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲು ಕೇಳಿಕೊಂಡಾಗ ನಿರ್ದೇಶಕರು, ತಂತ್ರಾಂಶದಲ್ಲಿ ಪುನಃ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ತದನಂತರ, ಗದಗ ತಾಲ್ಲೂಕಿನ ತಹಸೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರ ಇವರು ಅರ್ಜಿದಾರರನ್ನು ಸಂಪರ್ಕಿಸಿ, ಅವರಿಂದ ಸಂಪೂರ್ಣ ದಾಖಲೆಗಳೊಂದಿಗೆ ಈ ಯೋಜನೆ ಮಂಜೂರಾತಿಗಾಗಿ ತಂತ್ರಾಂಶದ ಮೂಲಕ ಪುನ: ಅರ್ಜಿಯನ್ನು ಅರ್ಜಿದಾರರಿಂದ ಸಲ್ಲಿಸಲು ಕ್ರಮ ವಹಿಸಿ ಯೋಜನೆಯ ಮಂಜೂರಾತಿ ಆದೇಶವನ್ನು ನೀಡಿದ್ದು, ಈ ಯೋಜನೆಯ ಪರಿಹಾರ ಧನವಾದ ರೂ. 20,000/- ಗಳ ಮಂಜೂರಾತಿಯನ್ನು ಮಾಡಲು ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ತಂತ್ರಾಂಶದ ಮೂಲಕ ರವಾನಿಸಲಾಯಿತು.
ತದನಂತರ ಅವರ ಜಿಲ್ಲಾಧಿಕಾರಿಗಳು ತಂತ್ರಾಂಶದಲ್ಲಿ ಅನುಮೋದನೆ ನೀಡಿ ರೂ. 20,000 ಹಣ ಪಾವತಿಗಾಗಿ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ಬೆಂಗಳೂರು ಇವರಿಗೆ ತಂತ್ರಾಂಶದ ಮೂಲಕ ಸಲ್ಲಿಸಿರುತ್ತಾರೆ. ನಂತರ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ಬೆಂಗಳೂರು ಇವರು ಡಿಬಿಟಿ ಮೂಲಕ ಫಲಾನುಭವಿ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಕ್ರಮ ವಹಿಸಿರುತ್ತಾರೆ. ಪ್ರಭುವಿನಡೆಗೆ “ಪ್ರಭುತ್ವ” ದಡಿ ವಿನೂತನ ತಂತ್ರಾಂಶದ ಮೂಲಕ ಸ್ವೀಕೃತವಾದ ಈ ಅರ್ಜಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.