ಗಾಂಜಾ ಸಹಿತ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಬಂಧನ: ಜಾಮೀನಿನ ಮೇಲೆ ಬಿಡುಗಡೆ

Most read

ಜೈಪುರ: ಮಹಾಕುಂಭಮೇಳದಲ್ಲಿ ಪ್ರತ್ಯಕ್ಷವಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್ ಅವರನ್ನು ಇಲ್ಲಿನ ಖಾಸಗಿ ಹೋಟೆಲ್‌ ನಲ್ಲಿ ಬಂಧಿಸಲಾಗಿದೆ.ಬಂಧನವಾದಾಗ ಅವರ ಬಳಿ ಗಾಂಜಾ ಸಹಿತ ಇದ್ದದ್ದು ಕಂಡು ಬಂದಿದೆ. ಸಧ್ಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಯ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಶಿಪ್ರಪಾತ್ ಎಸ್‌ ಎಚ್‌ ಒ ರಾಜೇಂದ್ರ ಕುಮಾರ್ ಹೇಳಿದ್ದಾರೆ.

ವಿಡಿಯೊ ಆಧರಿಸಿ ಸ್ಥಳಕ್ಕೆ ಧಾವಿಸಿ ಸಿಂಗ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆತನ ಬಳಿ ಅಲ್ಪ ಪ್ರಮಾಣದ ಗಾಂಜಾ ಪತ್ತೆಯಾಗಿದೆ ಎಂದು ರಾಜೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಸಿಂಗ್ ವಿರುದ್ಧ ಎನ್‌ ಡಿ ಪಿ ಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಕುಮಾರ್ ಹೇಳಿದ್ದಾರೆ.

ಕುಂಭಮೇಳದಲ್ಲಿ ಗಮನ ಸೆಳೆದಿದ್ದ ಐಐಟಿ ಬಾಬಾ:

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಆಧ್ಯಾತ್ಮಿಕರು ಪಾಲ್ಗೊಂಡಿದ್ದರು. ಭಕ್ತರು, ಸಾಧು ಸಂತರು, ನಾಗಾಸಾಧುಗಳಿಂದ ಪ್ರಯಾಗ್‌ರಾಜ್‌ ಕಳೆ ಕಟ್ಟಿತ್ತು. ಇವರ ನಡುವೆ ಐಐಟಿ ಬಾಂಬೆನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ಓದಿದ್ದ ಸಾಧುವೊಬ್ಬರು ‘ಐಐಟಿ ಬಾಬಾ’ ಎಂದು ತಮ್ಮನ್ನು ತಾವು ಕರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದರು.

ಅಭಯ್‌ ಸಿಂಗ್‌ ಎನ್ನುವರೇ ಈ ‘ಐಐಟಿ ಬಾಬಾ’. ಹರಿಯಾಣ ಮೂಲದ ಇವರು ತಮ್ಮ ವೃತ್ತಿ ಮತ್ತು ಲೌಕಿಕ ಬದುಕನ್ನು ಬಿಟ್ಟು ಆಧ್ಯಾತ್ಮದಲ್ಲಿ ತೊಡಗಿಕೊಂಡಿದ್ದಾರೆ. ವರದಿಗಳ ಪ್ರಕಾರ ಅಭಯ್‌ ಸಿಂಗ್‌ 2014ರಲ್ಲಿ ತಮ್ಮ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ. ಉತ್ತಮ ಸಂಬಳ ಪಡೆಯುತ್ತಿದ್ದರೂ ಅಭಯ್‌ ಅವರು ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ಫೋಟೊಗ್ರಫಿಯನ್ನು ಮಾಡುತ್ತಿದ್ದರು. ಪ್ರವಾಸಿ ಫೋಟೊಗ್ರಫಿ ಅಭಯ್‌ ಅವರ ನೆಚ್ಚಿನ ಹವ್ಯಾಸವಾಗಿತ್ತು. ಕ್ರಮೇಣ ಫೋಟೊಗ್ರಫಿ ಕೋರ್ಸ್‌ ಮಾಡುವ ಮೂಲಕ ಅದನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದರು. ನಂತರ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ದರು.

More articles

Latest article