ಯಾದಗಿರಿ: ಮೈಕ್ರೊ ಫೈನಾನ್ಸ್ ಕಂಪನಿಯವರು ಕಿರುಕುಳಕೊಡುತ್ತಿದ್ದಾರೆ ಎಂದು ದೂರು ನೀಡಿದರೆ ಅಂತಹವರನ್ನು ಕೂಡಲೇ ಬಂಧಿಸಿ ಜೈಲಿಗೆ ಹಾಕುವಂತೆ ಸೂಚನೆ ನೀಡಿದ್ದೇವೆ ಎಂದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಯಾದಗಿರಿಯಲ್ಲಿ ನಗರ ಠಾಣಾ ಉದ್ಘಾಟನೆ ಬಳಿಕ ಮಾತನಾಡಿದ ಗೃಹ ಸಚಿವರು ಇತ್ತೀಚೆಗೆ ಮೈಕ್ರೊ ಫೈನಾನ್ಸ್ ಕಂಪನಿಗಳು ಹುಟ್ಟಿಕೊಂಡಿವೆ. ಗೂಂಡಾಗಳನ್ನು ಸಾಕಿಕೊಂಡು ಗಲಾಟೆ ಮಾಡಿ, ಸಾಲ ತೆಗೆದುಕೊಂಡವರ ಮರ್ಯಾದೆಯನ್ನು ಹರಾಜು ಹಾಕುತ್ತಿವೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿದ್ಧೇವೆ. ಕಿರುಕುಳ ನೀಡುವ ದೂರು ಕೇಳಿ ಬಂದ ತಕ್ಷಣ ಅಂತಹ ಸಿಬ್ಬಂದಿಯನ್ನು ಹಿಡಿದು ಜೈಲಿಗೆ ಹಾಕುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಹೊಸದಾಗಿ ಕಾನೂನು ಮಾಡುವ ಅವಶ್ಯಕತೆ ಇದ್ದರೆ ಅದನ್ನೂ ಮಾಡುತ್ತೇವೆ. ಸಾಲಗಾರರು ದೂರು ಕೊಟ್ಟರೂ ಸರಿಯೇ, ಇಲ್ಲವೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಸಚಿವರು, ನೋಟಿಸ್ ಗೆ ಅವರು ತಕ್ಕ ಉತ್ತರ ಕೊಡುತ್ತಾರೆ. ಕೋರ್ಟ್ ಆದೇಶ ಮತ್ತು ಇಡಿ ನೋಟಿಸ್ ತನಿಖೆ ನಡೆಯುವಾಗ ನಾವು ಪ್ರತಿಕ್ರಿಯೆ ನೀಡಬಾರದು. ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ ಎಂದರು.