ಬೆಂಗಳೂರು: ಸರ್ಕಾರಿ ಜಮೀನು ಕಬಳಿಸುವ ಭೂಗಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ತಿದ್ದುಪಡಿ ಮಾಡಿರುವ ನೂತನ ಕಾಯಿದೆ ಈ ಮಾಸಾಂತ್ಯದೊಳಗೆ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್ ಗೆ ತಿಳಿಸಿದ್ದಾರೆ. ಜತೆಗೆ ಜಮೀನು ಕಬಳಿಸುವವರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಜರುಗಿಸಲು ಹೊಸ ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿರುವುದನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು. ಯಾರೇ ಆಗಿದ್ದರೂ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿ ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಿದ್ದರು. ಈ ಎಲ್ಲ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಹೊಸ ನಿಯಮ ರೂಪಿಸಿದೆ. ಇದರ ಕರಡು ಸಿದ್ದವಾಗಿದ್ದು, ಇನ್ನು ಮುಂದೆ ಭೂ ಕಬಳಿಕೆ ಅಷ್ಟು ಸರಳವಾಗಿರುವುದಿಲ್ಲ. ಎಷ್ಟೇ ಒತ್ತಡ ತಂದರೂ ನಿಯಮವನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.