Sunday, September 8, 2024

ಸತ್ಯವನ್ನೇ ಹೇಳುತ್ತೇನೆ ಬೋರ್‌ ಹೊಡೆಸಲ್ಲ..

Most read

ಜೀವಕ್ಕೆ ಜೀವ ಕೊಟ್ಟ ಎಷ್ಟೋ ಸ್ನೇಹಿತರು ತೀರಿಕೊಂಡಿದ್ದೂ ಇದೆ. ಅವರ ದಾರುಣ ಮರಣಕ್ಕೆ ಸಮಾಜದ ರಚನೆಗಳು, ರೂಢಿಗಳು, ನಿಯಮ, ಕಾನೂನು, ಸಾಮಾಜಿಕ ನೈತಿಕತೆ, ಕುಟುಂಬದವರ ಕಿರುಕುಳ‌, ನನ್ನ ಜೀವನದ ಅನುಭವ, ಕೆಲಸ, ನಾನು ಜೀವನ ಹಂಚಿಕೊಂಡ ಹಲವಾರು ಅವಕಾಶ ವಂಚಿತ ಜನರ ಕಥನಗಳು ಹೀಗೇ ಈ ಎಲ್ಲ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ – ರೂಮಿ ಹರೀಶ್‌, ಟ್ರಾನ್ಸ್‌ ಮ್ಯಾನ್

ನಾನು ಯಾರು? 42-43 ವರ್ಷಗಳ ವರೆಗೆ ನನಗೆ ಬೇಡದ ದೇಹದಲ್ಲಿ, ನನ್ನದಲ್ಲದ ಮನಸ್ಸಿನಲ್ಲಿ ನನಗೆ ಇಷ್ಟವೇ ಇಲ್ಲದ ಹೆಸರಿನಲ್ಲಿ ಬದುಕಿದ ವ್ಯಕ್ತಿ. ಹುಟ್ಟಿದ್ದು ಹೆಣ್ಣಾಗಿ. ನನ್ನ ಹೆಸರಿದ್ದಿದ್ದು ಸುಮತಿ. ನಾನು ನನ್ನ 13ನೇ ವಯಸ್ಸಿನ ತನಕ ಎಲ್ಲರಂತೆ ಇದ್ದೆ. 13 ನೇ ವಯಸ್ಸಿಗೆ ಟೈಫಾಯ್ಡ್ ಬಂತು. ಅದಾದ ಮೇಲೆ ನನ್ನ ದೇಹ ಕಾರಣವಿಲ್ಲದೇ ದಪ್ಪವಾಗ ತೊಡಗಿತು. ನನ್ನ ತಂದೆ ತಾಯಿ ಅಥವಾ ಮನೆಯವರು ಯಾರೂ ಇದು ಯಾಕೆ ಹೀಗೆ ಅಂತ ನೋಡುವುದು ಬಿಟ್ಟು, ಊಟ ತಿಂಡಿ ಹಿಡಿಯಲಾರಂಭಿಸಿ, ಪ್ರತಿ ನಿತ್ಯ 5 ಕಿಲೋ ಮೀಟರ್ ಓಡಿಸುತ್ತಿದ್ದರು. ಆದರೆ ಡಾಕ್ಟರ್ ಹತ್ರ ಕೇಳ್ಬೇಕು ಅಂತ ಒಮ್ಮೆಯೂ ಅವರಿಗೆ ಅನಿಸಲಿಲ್ಲ. ನನಗೆ 27 ವರ್ಷ ಇದ್ದಾಗ ನಾನೇ ಸಂಶಯ ಬಂದು ಹೋಗಿ ಟೆಸ್ಟ್ ಮಾಡಿಸಿಕೊಂಡ ಮೇಲೆ ತಿಳಿದಿದ್ದು ಹೈಪೋ ಥೈರಾಯ್ಡ್ ಆಗಿ ತುಂಬಾ ಅಂದ್ರೆ 13 ವರ್ಷಗಳು ಚಿಕಿತ್ಸೆ ಇಲ್ಲದೆ ಎಳೆದು ಬಿಟ್ಟು ಹೀಗೆ ನನ್ನ ದೇಹ ವಿರೂಪವಾಗಿತ್ತು. ಆ ಕೀಳರಿಮೆ ಜೀವನ ಪರ್ಯಂತ ನನ್ನ ಸುಡುತ್ತಿದೆ. ಇಡೀ ಜಗತ್ತಿಗೇ ನನ್ನ ದೇಹ ಭಾರವೆನಿಸಿತ್ತು, ನನ್ನನ್ನು ಬಿಟ್ಟು.

ಆ ವಯಸ್ಸಿನಲ್ಲೂ ಅದು ನನ್ನ ದೇಹವಲ್ಲ, ಇವರೆಲ್ಲಾ ಯಾಕೆ ಹೀಗೆ ನನಗೆ ಶಿಕ್ಷೆ ಕೊಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೆ. ನನ್ನ ಕಲ್ಪನೆಯಲ್ಲಿ ನನ್ನ ದೇಹ ಇವರು ಹೇಳಿದಂತೆ ಇರಲಿಲ್ಲ. ಆ ವಯಸ್ಸಿನಲ್ಲಿ ನನಗೆ ಒಂದಂತೂ ಖಚಿತವಾಯ್ತು. ಕನ್ನಡಿಯೂ ಸುಳ್ಳು ಹೇಳುತ್ತದೆ. ನಾನು ಕನ್ನಡಿ ನೋಡಿದಾಗಲೆಲ್ಲಾ ಆ ಪ್ರತಿಬಿಂಬ ನಾನಾಗಿರಲಿಲ್ಲ. ಅದು ಯಾರೋ ಬೇರೆ … ಸುಮತಿ… ಅವಳು ನನಗೆ ತಿಳಿದಿಲ್ಲ. ಆ ಮನಸ್ಸು, ಆ ದೇಹ ಆ ಪ್ರತಿಬಿಂಬ ನನ್ನದಲ್ಲ. ಆ ದನಿ ಮಾತ್ರ ನನ್ನದಾಗಿತ್ತು.

ಕನ್ನಡಿಗೇನು ಉಸಾಬರಿ

ಸುಳ್ಳು ಮುಖಕ್ಕೆ ರಾಚಿ

ನನ್ನ ನಾನಾಗದಂತೆ

ಹೆಣ್ಣೆಂದು ಹೇಳಿ

ಭೀತಿ ಹುಟ್ಟಿಸಿ

ನನಗೆ ಮೋಸ ಮಾಡಲು….

ಮತ್ತೆ ತಿಳಿದು ನೊಂದೆ,

ಕನ್ನಡಿ ಮಾತ್ರವಲ್ಲಾ

ಜಗತ್ತಿಗೇನು ಉಸಾಬರಿ

ನಾನು ಹೆಣ್ಣೆಂದು

ಹಣೆಗೆ ಕಟ್ಟಿ

ಅಸ್ತಿತ್ವವೇ ಕೊಲ್ಲಲು?

ಆಗಿನ್ನೂ ನನಗೆ 12-13 ವರ್ಷ…. ಆಗ ನನಗೆ ಒಬ್ಬಳು ಹುಡುಗಿಯ ಮೇಲೆ ಪ್ರೇಮವಾಯಿತು. ಆ ಪ್ರೇಮದಲ್ಲಿ ನಮ್ಮಿಬ್ಬರಿಗೂ ಯಾವ ಲಿಂಗತ್ವವೂ ತಿಳಿಯಲಿಲ್ಲ. ಒಟ್ಟಿಗೆ ಬದುಕಬೇಕು ಎಂದು ನಾನು ಯಾವಾಗಲು ಹೇಳುತ್ತಿದ್ದೆ. ಆದರೆ ಅವಳು ಯಾವಾಗಲೂ ಹೇಳುತ್ತಿದ್ದಳು- ಇಂತಹ ಸಂಬಂಧಗಳನ್ನು ಜೀವಂತವಾಗಿರಲು ಬಿಡುವುದಿಲ್ಲ ಎಂದು. ಅವಳು ೧೮ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಕಾರಣಗಳು ನನಗೆ ತಿಳಿದಿರಲಿಲ್ಲ. ಆಗ ಒಂಟಿಯಾದ ನನಗೆ ಇವತ್ತಿಗೂ ಜೀವನದಲ್ಲಿ ಒಬ್ಬರು ಸ್ಥಿರ ಜೀವನ ಸಾಥಿ ಅಂತ ಇಲ್ಲ. ಆದರೆ ಜೀವದ ಗೆಳೆಯ ಸುನಿಲ ನನ್ನೆಲ್ಲಾ ಸಮಯದಲ್ಲೂ ನನ್ನ ಜೊತೆ ನಿಂತಿದ್ದಾನೆ. ನಾನೂ ಹಾಗೆ. ಅವನ ಪ್ರತಿಯೊಂದು ವಿಷಯಕ್ಕೂ ಜೊತೆ ನಿಂತಿದ್ದೇನೆ.

ಈ ಅಂಕಣದಲ್ಲಿ ನನ್ನ ಜೀವನದ ಅನುಭವ, ಕೆಲಸ, ನಾನು ಜೀವನ ಹಂಚಿಕೊಂಡ ಹಲವಾರು ಅವಕಾಶ ವಂಚಿತ ಜನರ ಕಥನಗಳು, ಯಶೋಗಾಥೆಗಳ ಕೆಂಪು ರಂಗೋಲಿಯನ್ನು ಹಾಕಿ ನಿಮ್ಮ ಮನಸ್ಸಿನಂಗಳಕ್ಕೆ ಇವರೆಲ್ಲರನ್ನೂ ಪರಿಚಯಿಸುತ್ತೇನೆ.

ರೂಮಿ ಹರೀಶ್

ನಮ್ಮ ಕಿಸ್ಸಾಗಳಿಗೇನೂ ಕೊರತೆ ಇಲ್ಲ. ಸಮಾಜದ ರಚನೆಗಳಿಗೆ ಸವಾಲೆಸೆದು ತಮ್ಮ ಬದುಕನ್ನು ಘನತೆಯಿಂದ ಕಟ್ಟಿಕೊಳ್ಳುವ ಪ್ರಯತ್ನಗಳು ಒಬ್ಬೊಬ್ಬರೂ ತಮ್ಮ ಜೀವನ ನಡೆಸಲು ಮಾಡಿರುವ ಹೋರಾಟಗಳೇ ಆಗಿವೆ. ಜೊತೆ ಜೊತೆ ನಡೆಯುವ ಸಾಮಾಜಿಕ ಹೋರಾಟಗಾರರೂ ಕೆಲವೊಮ್ಮೆ ಸಂಕೋಚದಿಂದ ಒಳಗೊಳ್ಳದೇ ನಮ್ಮ ಗೌರವಕ್ಕೆ ಧಕ್ಕೆ ಬಂದಿರುವ ಸಂದರ್ಭ ಗಳಿವೆ. ನಾನು ಹೇಳುತ್ತಿರುವ ನಮ್ಮ ಜನರು ಅಂದ್ರೆ, ಲೈಂಗಿಕ ಕಾರ್ಮಿಕರು, ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರು, ಪೌರಕಾರ್ಮಿಕರು, ಸ್ಲಂನಲ್ಲಿ ಬದುಕುವ ಜನರು, ಕ್ವಿಯರ್ ಮಹಿಳೆಯರು ಮತ್ತು ಪುರುಷರು, ಗೇ, ಅಂತರಲಿಂಗ ವ್ಯತ್ಯಾಸವಿರುವ ಜನರು, ಲೆಸ್ಬಿಯನ್, ಕೋಥಿ, ಡಿಡಿ, ಬೈಸೆಕ್ಷುವಲ್ ಹೀಗೆ ಹಲವಾರು ಜನರ ಬದುಕಿನ ಕಥನಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಆದರೆ ಅವರ ವಿವರಗಳ ಬಗ್ಗೆ ನಾನು ಗೌಪ್ಯತೆ ಕಾದುಕೊಳ್ಳುವುದು ನನ್ನ ಜವಾಬ್ದಾರಿ. ನಂ ಸೀತು ಹೇಳ್ತಿದ್ದಂತೆ ‘ಜಬಾಬ್ದಾರಿ’.

ಸೀತು ಒಂದು ವಿಚಿತ್ರ. ಸಮಲಿಂಗ ಪ್ರೇಮಿಯಾದ್ದರಿಂದ ಅವಳಿಗೆ ನನ್ನ ಸುನಿಲಿನ ಸಂಬಂಧ ಗಂಡ ಹೆಂಡತಿಯಂತೆ ಎಂದು ಭಾವಿಸಿ ಯಾವಾಗ್ಲೂ “ನಿಮ್ಮನೆಯೆವರೆಲ್ಲಿ” ಅಂತಿದ್ಲು. ನಂಗೆ ಮೈಯೆಲ್ಲಾ ಉರ್ದು ಹೋಗೋದು. ಈ ಗಂಡ, ಹೆಂಡತಿ, ಮನೆ, ಅತ್ತೆ, ಮಾವ, ಅಮ್ಮ, ಅಪ್ಪ ಮುಂತಾದವರನ್ನು  ನಾನು ನನ್ನ ಜೀವನದಲ್ಲಿ 27 ವರ್ಷ ಸಹಿಸಿ ಅಂತಾ ಜೀವನ ನನಗೆ ಬೇಡ ಎಂದು ನಾನು ಮನೆ ಬಿಟ್ಟು ಬಂದಿದ್ದು. ನನಗೆ ಆ ವ್ಯವಸ್ಥೆಯೇ ಹೇಸಿಗೆ. ಅದರಲ್ಲಿ ಸ್ವಾತಂತ್ರ್ಯ ಇಲ್ಲ, ಜಗಳವಾಡುವ ಆಪ್ತತೆ ಇಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಕುಟುಂಬದಲ್ಲಿ ಡೆಮಾಕ್ರಸಿ ಇರಬೇಕು. ಅದೇ ಇಲ್ಲದ ಮೇಲೆ ಅಂತಹ ವ್ಯವಸ್ಥೆ ಯಾಕೆ?

ಸುನಿಲು ನಾನು ಸಂಬಂಧದಲ್ಲಿರುವಾಗ ಒಂದು ಕ್ಷಣಾನೂ ಇಂತಹ ಕೌಟುಂಬಿಕ ಪಾತ್ರಗಳಿಗೆ ಒಡ್ಡಿಕೊಂಡಿಲ್ಲ. ಇಬ್ಬರಿಗೂ ಗೆಳೆಯರಾಗಿರುವುದೇ ನಮ್ಮ ಸಂವಿಧಾನ. ಸಮತೆ, ಅದು ಮನೆಯಲ್ಲಿ ಯಾರೇ ಇರಬಹುದು ಎಲ್ಲರಿಗೂ ಸಮತೆಯ ಹಕ್ಕು, ಮುಕ್ತವಾಗಿ ಮಾತನಾಡುವುದು, ಏನೂ ಮುಚ್ಚಿಡದೇ ಯಾವುದೇ ಸಂಶಯಗಳು ಬರದಂತೆ ನಡೆದು ಕೊಳ್ಳುವುದು ನಮ್ಮ ಮನೆಯ ನಿಯಮಗಳು. ಆದರೆ ನಮ್ಮನೆಗೆ ಯಾರು ಬೇಕಾದರೂ ಬರಬಹುದು. ಅಂತದ್ದೊಂದು ಮನೆ ಮಾಡಿದ್ದು ಸುನಿಲ. ಸುನಿಲ ಸಿಗುವವರೆಗು ನನಗೆ ಈ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ್ದರಿಂದ ಅಲೆಮಾರಿಯಾಗಿದ್ದೆ. ಎಲ್ಲಿ ಕೆಲಸ ಇದೆಯೋ ಅಲ್ಲೇ ಇದ್ದು ಕೆಲಸ ಮುಗಿದ ನಂತರ ಮುಂದಿನ ಕೆಲಸಕ್ಕೆ ಹೋಗುತ್ತಿದ್ದೆ. ಆ ಒಂದು ಬ್ಯಾಗು ಮತ್ತು ನನ್ನ ಗಾಡಿ ಇವೆರಡೇ ನನ್ನ ಜಗತ್ತು. ಅದರಲ್ಲಿ ಹಲ್ಲುಜ್ಜೋ ಬ್ರಶ್ ಇಂದ ಹಿಡಿದು, ನ್ಯಾಪ್ಕಿನ್, ಔಷಧಿ ಎಲ್ಲಾ ಇರ್ತಿತ್ತು.

ಹೀಗೆ, ಜೀವಕ್ಕೆ ಜೀವ ಕೊಟ್ಟ ಎಷ್ಟೋ ಸ್ನೇಹಿತರು ತೀರಿಕೊಂಡಿದ್ದೂ ಇದೆ. ಅವರ ದಾರುಣ ಮರಣಕ್ಕೆ ಸಮಾಜದ ರಚನೆಗಳು, ರೂಢಿಗಳು, ನಿಯಮ, ಕಾನೂನು, ಸಾಮಾಜಿಕ ನೈತಿಕತೆ, ಕುಟುಂಬದವರ ಕಿರುಕುಳ…. ಹೀಗೇ ಆ ಎಲ್ಲ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಅಂಕಣ ಬರೀತಾ ಇದ್ದೇನೆ. ನಿಜ ಹೇಳ್ತೀನಿ ಬೋರ್ ಮಾಡಲ್ಲ, ಗ್ಯಾನ್ ಕೊಡಲ್ಲ. ನನ್ನಾಣೆ.

ರೂಮಿ ಹರೀಶ್‌

ಟ್ರಾನ್ಸ್‌ ಮ್ಯಾನ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು,ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತುಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರು ಬರೆಯುವ ‘ರೂಮಿ ಕಾಲಂ’ ಪ್ರತಿವಾರ ಪ್ರಕಟವಾಗಲಿದೆ.

More articles

Latest article