ಬೆಂಗಳೂರು: ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾಳೆ ಅವರು ಅಪರಾಧಿ ಎಂದು ತೀರ್ಮಾನವಾದರೂ ನಾನು ಅವರೊಂದಿಗೆ ನಿಲ್ಲುತ್ತೇನೆ. ಇದು ನನ್ನ ನಿಲುವು ಎಂದು ನಟಿ ಭಾವನಾ ದಿಟ್ಟ ನುಡಿಗಳನ್ನಾಡಿದ್ದಾರೆ.
ಅಲ್ಲಿ ಏನು ಘಟನೆ ನಡೆದಿದೆಯೋ ಅದರ ಕುರಿತು ನನ್ನ ನಿಲುವು ಬೇರೆ ಇರಬಹುದು. ಆದರೆ ದರ್ಶನ್ ವಿಷಯದಲ್ಲಿ ನನ್ನ ನಿಲುವು ಅಚಲ. ಈಗಲೂ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ, ಮುಂದೆಯೂ ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಅವರು ಖಾಸಗಿ ಚಾನಲ್ ಒಂದರ ಜೊತೆಗಿನ ಸಂದರ್ಶನದಲ್ಲಿ ಬಿಚ್ಚುನುಡಿಗಳನ್ನಾಡಿದ್ದಾರೆ.
ದರ್ಶನ್ ಪ್ರಕರಣವನ್ನು ಮಾಧ್ಯಮಗಳು ನಿಭಾಯಿಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಮೀಡಿಯಾದವರು ಚೆನ್ನಾಗಿ ಕೆಲಸ ಮಾಡ್ತಿದ್ದೀರಿ, ಆದರೆ ಒಗ್ಗರಣೆ ಜಾಸ್ತಿ ಹಾಕ್ತಾ ಇದ್ದೀರಿ ಎಂದು ನುಡಿದರು. ಯಾವುದೇ ಹೆಣ್ಣುಮಗಳಿಗೆ ಇನ್ಯಾರೋ ವ್ಯಕ್ತಿ ಏನು ಬೇಕಾದರೂ ಮೆಸೇಜು ಕಳಿಸಬಹುದಾ? ಪ್ರಕರಣದಲ್ಲಿ ಇನ್ನೊಂದು ಆಯಾಮ ಇದೆಯಲ್ಲವೇ? ಅದನ್ನೇಕೆ ನೀವು ಹೇಳ್ತಾ ಇಲ್ಲ ಎಂದು ಅವರು ಮಾಧ್ಯಮಗಳನ್ನು ಪ್ರಶ್ನಿಸಿದರು.
ಸೂರಜ್ ರೇವಣ್ಣ ಅತ್ಯಾಚಾರ ಪ್ರಕರಣವನ್ನು ಉದಾಹರಿಸಿದ ಅವರು ಸುಪ್ರೀಂ ಕೋರ್ಟ್ 377 ನೇ ವಿಧಿಗೆ ಸಂಬಂಧಿಸಿದಂತೆ ಸಮ್ಮತಿಯ ಸಲಿಂಗ ಕಾಮವನ್ನು ಕಾನೂನುಬದ್ಧಗೊಳಿಸಿದೆ. ಆದರೆ ಒಬ್ಬ ವ್ಯಕ್ತಿ ತನಗೆ ಇನ್ನೊಬ್ಬನಿಂದ ತೊಂದರೆಯಾಗಿದೆ ಎಂದು ಬಂದರೆ, ದೂರು ನೀಡಿದರೆ ಸಂತ್ರಸ್ತನನ್ನೇ ಅಪರಾಧಿ ಯಾಕೆ ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು.
ನನಗೆ ವೈಯಕ್ತಿಕವಾಗಿ ಮಚ್ಚು, ಲಾಂಗು ಸಿನಿಮಾಗಳು ಇಷ್ಟವಿಲ್ಲ. ಆದರೂ ಮಾಡಿದ್ದೇನೆ. ಕೆಜಿಎಫ್ ಚಿತ್ರ ಸಾವಿರಾರು ಕೋಟಿ ರುಪಾಯಿ ದುಡ್ಡು ಮಾಡಿತು ಎಂದು ನೀವು ಹೇಳಿದಿರಿ. ಆದರೆ ದೊಡ್ಡಮಟ್ಟದ ಹಿಂಸೆ ಇರುವ ಚಿತ್ರಗಳು ಜನರ ಮನಸುಗಳ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ನೀವು ಮಾತಾಡಿದಿರಾ ಎಂದು ಭಾವನಾ ಕೇಳಿದರು.
ರೇಣುಕಾಸ್ವಾಮಿ ಕುಟುಂಬಕ್ಕೆ ನಾನು ಈಗಾಗಲೇ ಸಾಂತ್ವನ ಹೇಳಿದ್ದೇನೆ. ನನ್ನ ನಿಲುವು ಸ್ಪಷ್ಟವಾಗಿದೆ. ಒಬ್ಬ ವ್ಯಕ್ತಿಯಾಗಿ ನಾನು ದರ್ಶನ್ ಅವರನ್ನು ಬೆಂಬಲಿಸುತ್ತೇನೆ. ಅದರಲ್ಲಿ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.
ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಹಲವರು ದರ್ಶನ್ ವಿರುದ್ಧ ಟೀಕೆ ಮಾಡುತ್ತಿದ್ದರೆ, ಮತ್ತೆ ಕೆಲವರು ಮೌನಕ್ಕೆ ಶರಣಾಗಿದ್ದರು. ಕೆಲವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಹೀಗಿರುವಾಗ ದರ್ಶನ್ ಪರವಾಗಿ ಮೊಟ್ಟ ಮೊದಲ ಬಾರಿ ನಟಿ ಭಾವನಾ ಧ್ವನಿ ಎತ್ತಿರುವುದು ವಿಶೇಷವಾಗಿದೆ.