ಮನುಷ್ಯರ ತಪ್ಪುಗಳು, ನಿಸರ್ಗದ ಪೆಟ್ಟುಗಳು

Most read

ಮನುಷ್ಯನ ಕಾರ್ಪೋರೇಟ್ ದುರಾಸೆ ಮತ್ತು ಕ್ರೌರ್ಯವನ್ನೇ ನಾಚಿಸುವ ನಿರ್ಲಕ್ಷ್ಯತನಗಳ ಜೊತೆ ಹವಾಮಾನ ಬದಲಾವಣೆ ಸುರಿಯುತ್ತಿರುವ ನೈಸರ್ಗಿಕ ಅತಿರೇಕಗಳು ಕೂಡಿಕೆ ಮಾಡಿಕೊಂಡರೆ ಯಾವ ದುರಂತ ಜರುಗಬಾರದೊ ಅದೇ ಮುಂಬೈನಲ್ಲಿ ಜರುಗಿ ಏನೂ ತಪ್ಪಿರದ 17 ಬಡಪಾಯಿಗಳ ಜೀವಕ್ಕೆ ಎರವಾಯಿತು. ಹಲವು ಹಂತಗಳ ಲೋಕಸಭಾ ಚುನಾವಣೆಗಳ ಹೊರೆಯನ್ನು ದೇಶ ಹೊತ್ತು ಉಸ್ಸೆನ್ನುತ್ತಿರುವುದರ ನಡುವೆ ಈ ದುರಂತದ ಬಗ್ಗೆ ನಾಲ್ಕಾರು ದಿನಗಳವರೆಗೆ ಮಾಧ್ಯಮಗಳು ಒಂದಷ್ಟು ವರದಿ ನೀಡಿ, ಆಮೇಲೆ ಚುನಾವಣೆಗಳತ್ತ ಹೊರಳಿಕೊಂಡವು. ದುರಂತದ ಜೊತೆ ಹವಾಮಾನ ಬದಲಾವಣೆಯನ್ನೂ ಆಳ ಚರ್ಚೆಗೆ ಒಳಪಡಿಸಬೇಕಿದ್ದ ಹೊಣೆಗಾರಿಕೆಗೆ ಬೆನ್ನು ಮಾಡಿದವು (ಒಂದೆರಡು ಉದಾಹರಣೆಗಳ ಹೊರತಾಗಿ). ಒಮ್ಮೊಮ್ಮೆ ಅನಿಸುತ್ತೆ, ನಾನಿನ್ನೂ ಈ ಮಾಧ್ಯಮಗಳು ತುಸು ಬದಲಾಗಲಿ ಎಂದು ಯಾಕೆ ಬಯಸುತ್ತೇನೆ, ನನಗೇ ತಿಳಿಯದಾಗಿದೆ. ಇರಲಿ ಮುಖ್ಯ ವಿಷಯಕ್ಕೆ ಬರೋಣ.

ಮುಂಬೈನಲ್ಲಿ ಜರುಗಿದ್ದೇನು?

ಘಾಟ್ಕೋಪರ್ ಪ್ರದೇಶದಲ್ಲಿ ಬೃಹತ್‌ ಜಾಹೀರಾತು ಫಲಕ ಕುಸಿದು ಬಿದ್ದಿರುವುದು

ಮೇ 13ರಂದು ಬೆಳಿಗ್ಗೆ ಮುಂಬೈ ಮೇಲೆ ದಟ್ಟ ದೂಳಿನ ಬಿರುಗಾಳಿ ಬೀಸತೊಡಗಿತು. ಬರಬರುತ್ತ ಗಾಳಿಯ ಬಿರುಸು ಹೆಚ್ಚಿ ತಾಸಿಗೆ 107 ಕಿ.ಮೀ. ಒತ್ತರವನ್ನು ಪಡೆಯಿತು. ದೊಡ್ಡ ದೊಡ್ಡ ಮುಗಿಲುಚುಂಬಿ ಕಟ್ಟಡಗಳೇ ಅಲುಗಾಡಿ ಬಿದ್ದುಹೋದಾವೇನೊ ಎಂಬಂತಿದ್ದ ಬಿರುಗಾಳಿಯ ಹುಯಿಲಿಗೆ ದಿಗಿಲುಗೊಂಡ ಜನ ಬಾಯಿಕಟ್ಟಿದರು. ಮುಂಬೈ ನಗರದ ನೋಟ ಬಹುತೇಕ ಮಬ್ಬಾಗಿ ಹೋಯಿತು. ಬಿರುಗಾಳಿ ಬೇಗನೆ ನಿಂತುಹೋದರೆ ಸಾಕಪ್ಪ ಎಂದು ಹಾರಯಿಸುತ್ತಿದ್ದ ಜನರಿಗೆ ಘಾಟ್ಕೋಪರ್ ಪ್ರದೇಶದಿಂದ ಈವರೆಗೆ ಕಲ್ಪಿಸದೇ ಇದ್ದ ಕೆಟ್ಟ ಸುದ್ದಿಯೊಂದು ಬರಬಹುದು ಎಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ಒಂದೆಡೆ ಬಹು ದೂರದವರೆಗೆ ಕಾಣಲೇ ಬೇಕು ಎಂಬಂತೆ ನಿಲ್ಲಿಸಿದ್ದ 120 ಅಡಿ ಎತ್ತರ ಮತ್ತು 120 ಅಡಿ (ಹನ್ನೆರಡು 30*40 ನಿವೇಶನಗಳ ವಿಸ್ತೀರ್ಣಕ್ಕೆ ಸಮನಾದ) ಅಗಲದಷ್ಟು ಚಚ್ಚೌಕದ ಭಾರೀ ಜಾಹೀರಾತು ಫಲಕವೊಂದು ದೂಳಿನ ಬಿರುಗಾಳಿಗೆ ಎದೆಸೆಟೆಸಿ ನಿಲ್ಲಲಾಗದೆ ಭಾರೀ ಮುರಿಯುವ ಸದ್ದಿನೊಂದಿಗೆ ಬೆನ್ನಡಿಯಾಗಿ ಕುಸಿದು ಬಿತ್ತು. ಪ್ರಚಾರಕ್ಕೆಂದು ತನ್ನನ್ನು ನಿಲ್ಲಿಸಿದ್ದು ಎಂದು ಅರಿವಿದ್ದವರ ಹಾಗೆ ತನ್ನ ಮೇಲೆ ಬರೆದುಕೊಂಡ MINIMAX  ಎಂಬ ಬರಹ ಮತ್ತು 9930050050 ಎಂಬ ಸೆಲ್‍ಫೋನ್ ನಂಬರನ್ನು ಆಕಾಶಕ್ಕೆ ಕಾಣಿಸುವ ರೀತಿಯಲ್ಲಿ ಜಾಹೀರಾತು ಫಲಕ ಕುಸಿದಿತ್ತು. ಸಾವಿನಲ್ಲೂ ಅದರ ಕರ್ತವ್ಯಕ್ಕೆ ಊನವಾಗಿರಲಿಲ್ಲ. ಆದರೆ…..

ಜಾಹಿರಾತು ಫಲಕದ ತೀರಾ ಹಿಂದೆಯೆ ಒಂದು ದೊಡ್ಡ ಪೆಟ್ರೋಲ್ ಬಂಕು ಇತ್ತು. 250 ಟನ್ ತೂಗುವ ಫಲಕ ಆ ಬಂಕಿನ ಮೇಲೆ ಬೀಳುವ ಗಳಿಗೆಯಲ್ಲಿ ಬಂಕಿನಲ್ಲಿ 71ಕ್ಕೂ ಹೆಚ್ಚು ಬಗೆಯ ವಾಹನಗಳು ಇಂಧನ ತುಂಬಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದವು. ಅವುಗಳ ಮಾಲೀಕರು, ಸಿಬ್ಬಂದಿಗಳು ಮತ್ತಿತರರು ಸೇರಿ ನೂರಕ್ಕೂ ಹೆಚ್ಚು ಮಂದಿ ಬಂಕಿನಲ್ಲಿದ್ದರು. ಏನು ಜರುಗುತ್ತಿದೆ ಎಂದು ಅರಿವಾಗುವ ಮುನ್ನವೇ 16ಕ್ಕೂ ಹೆಚ್ಚು ಮಂದಿ ನೂರಾರು ಕಬ್ಬಿಣದ ಭಾರೀ ತೊಲೆ, ಹಲಗೆ, ಪಟ್ಟಿಗಳಡಿ ಸಿಕ್ಕಿ ಅಸುನೀಗಿದ್ದರು (ರಿಕ್ಷಾಚಾಲಕರೊಬ್ಬರು ನಂತರ ಅಸುನೀಗಿದರು. ಕೆಲವರು ಕೂಡಲೆ ತೀರಿಕೊಂಡರೆ ಇನ್ನು ಕೆಲವರು ಪರಿಹಾರ ಕಾರ್ಯ ತಡವಾಗಿದ್ದರಿಂದ ತೀರಿಕೊಂಡರು). 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ದುರಂತದ ತೀವ್ರತೆ ಸಂಬಂಧಪಟ್ಟ ಆಡಳಿತಗಳಿಗೆ ತಟ್ಟುವ ಹೊತ್ತಿಗೆ 21 ತಾಸುಗಳು ಕಳೆದುಹೋದವು. ನಂತರ 500 ಟನ್ ತೂಗುವ ಎರಡು ಭಾರೀ ಕ್ರೇನುಗಳನ್ನು ತಂದು ಫಲಕದ ಹಾಳುಳಿಕೆಗಳನ್ನು ತೆರವುಗೊಳಿಸಿ ಸಿಕ್ಕಿಕೊಂಡವರನ್ನು ರಕ್ಷಿಸುವ ಕೆಲಸ ಶುರುವಾಯಿತು. ಖಾಸಗಿಯಾಗಿ ಕ್ರೇನುಗಳನ್ನು ಲಗುಬಗೆಯಿಂದ ಒದಗಿಸಿದ ಫಯಾಜ್ ಶೇಕ್ ಪ್ರಕಾರ ‘ನಮ್ಮ ಕ್ರೇನುಗಳು 500 ಟನ್ ತೂಗಿದರು ಅವು ಒಮ್ಮೆಲೆ 50 ಟನ್ ಭಾರವನ್ನಷ್ಟೆ ಎತ್ತಬಲ್ಲವು. ನಿಜಕ್ಕೂ ನಮಗೆ ಇದೇ ಸಾಮರ್ಥ್ಯದ ಇನ್ನೂ ಮೂರು ಕ್ರೇನುಗಳು ಬೇಕು. ನನ್ನ ಬಳಿ ಇದ್ದದ್ದು ಎರಡೇ’ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಅವರ ಪ್ರಕಾರ ಐದು ಕ್ರೇನುಗಳಿದ್ದು ಅವು ಒಮ್ಮೆಲೆ ಕೆಲಸ ಮಾಡಲು ಅವಕಾಶವಿದ್ದಿದ್ದರೆ ಕೆಲವರನ್ನಾದರೂ ಸಾವಿನ ದವಡೆಯಿಂದ ಕಾಪಾಡಬಹುದಿತ್ತೇನೊ, ಗೊತ್ತಿಲ್ಲ. 250 ಮಂದಿ ರಕ್ಷಣಾ ಸಿಬ್ಬಂದಿ 63 ತಾಸುಗಳ ತನಕ ಸತತ ಕಾರ್ಯಾಚರಣೆ ನಡೆಸಿ ಫಲಕದಡಿ ಸಿಕ್ಕಿಕೊಂಡವರನ್ನು ಹೊರತೆಗೆದರು.

ಮರುಕವಿಲ್ಲದವರ ನಡುವೆ ಮನುಷ್ಯರನ್ನು ಹುಡುಕಬಹುದೆ?

ದಟ್ಟ ದೂಳಿನ ಮುಂಬೈ

ಮುಂಬೈನಂತಹ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ಕ್ರೇನುಗಳ ಕೊರತೆ ಇದೆ ಎನ್ನುವುದೇ ಬೇಸರದ ವಿಚಾರ. ದುರಂತಗಳು ಮನುಷ್ಯರ ಅಸಹಾಯಕತೆ ಮತ್ತು ಸನ್ನದ್ಧತೆಗಳ ಕೊರತೆಯನ್ನು ಮುಖಕ್ಕೆ ರಾಚಿದಂತೆ ತೋರ್ಪಡಿಸುತ್ತವೆ. ಇಲ್ಲಿ ಅದೇ ಆಗಿದ್ದು. ಬಹಳ ಬೇಸರದ ಸಂಗತಿಯೆಂದರೆ ಕುಸಿದು ಬಿದ್ದ ಜಾಹೀರಾತು ಫಲಕವನ್ನು ಜನನಿಬಿಡ ಜಾಗದಲ್ಲಿ ಅಕ್ರಮವಾಗಿ ನಿಲ್ಲಿಸಲಾಗಿತ್ತು. ಮುಂಬೈ ಮಹಾನಗರ ಪಾಲಿಕೆಯ ನಿಯಮದಂತೆ 40 ಅಡಿ ಎತ್ತರ, 40 ಅಡಿ ಅಗಲವನ್ನು ಮೀರಿದ ಫಲಕಗಳನ್ನು ನಿಲ್ಲಿಸುವಂತಿಲ್ಲ. ಈ ನಿಯಮವನ್ನು ರಾಜಾರೋಷವಾಗಿ (ದೂಳಿನ) ಗಾಳಿಗೆ ತೂರಲಾಗಿತ್ತು. ಮಹಾರಾಷ್ಟ್ರ ಸರ್ಕಾರದ ಪೋಲಿಸ್ ಗೃಹ ಕಲ್ಯಾಣ ನಿಗಮಕ್ಕೆ ಸೇರಿದ, ರೇಲ್ವೆ ಪೋಲಿಸ್ ನಿರ್ವಹಿಸುತ್ತಿದ್ದ ನಿವೇಶನದಲ್ಲೆ ಈ ಫಲಕವಿದ್ದದ್ದು ಚೋದ್ಯದ ವಿಚಾರ. ಅಕ್ರಮ ಎಂದು ಗೊತ್ತಿದ್ದರೂ ಫಲಕವನ್ನು ಪೂರ್ತಿ ನಿಲ್ಲಿಸುವ ತನಕ ಪಾಲಿಕೆಯು ಮುಗುಮ್ಮಾಗಿಯೆ ಇದ್ದು ಆಮೇಲೆ ಮೂರು ನೋಟಿಸುಗಳನ್ನು ಫಲಕ ನಿಲ್ಲಿಸಿದ್ದ ಇಗೊ ಮೀಡಿಯ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಭಾವೇಶ್ ಭಿಡೆಗೆ ಕಳಿಸಿತ್ತು. ಮೊದಲ ನೋಟಿಸಿನಲ್ಲಿ (2023ರ ಮಾರ್ಚ್) ಕಂಪೆನಿಗೆ 6.14 ಕೋಟಿ ರೂಪಾಯಿ ಲೈಸೆನ್ಸ್ ಶುಲ್ಕವನ್ನು ಪಾವತಿಸಬೇಕೆಂದು ಸೂಚಿಸಿತ್ತು. ಕಳೆದ ಮೇ 2ರಂದು ಕಳಿಸಿದ ಎರಡನೇ ನೋಟಿಸಿನಲ್ಲಿ ಕಂಪೆನಿಯು ಫಲಕ ನಿಲ್ಲಿಸುವಾಗ ಅನುಮತಿಯಿಲ್ಲದೆ ಕಡಿದುಹಾಕಿದ ಮರಗಳ ಬಗ್ಗೆ ಬರೆದಿತ್ತು (40ಕ್ಕೂ ಹೆಚ್ಚು ಮರಗಳಿಗೆ ವಿಷವನ್ನು ಚುಚ್ಚಿ ಸಾಯಿಸಲಾಗಿತ್ತಂತೆ). ಮೂರನೆಯ ನೋಟಿಸು ದುರಂತ ಜರುಗುವ ಒಂದು ದಿನ ಮುಂಚೆ ಕಂಪೆನಿಗೆ ‘ನಿಮ್ಮದು ಒಂದು ಅನಧಿಕೃತ ಜಾಹೀರಾತು ಫಲಕ’ ಎಂದು ನೆನಪಿಸಿತ್ತು, ಅಷ್ಟೆ. ಯಾವ ನೋಟಿಸಿನಲ್ಲೂ ಅಕ್ರಮ ಫಲಕವನ್ನು ತಾನು ತೆರವುಗೊಳಿಸಿ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಪಾಲಿಕೆ ಹೇಳಿರಲಿಲ್ಲ. ಹೀಗೆ ಹೇಳದಿರಲು ಅಲ್ಲಿರುವ ಯಾರುಯಾರಿಗೆ ಎಷ್ಟೆಷ್ಟು ‘ಕೈ ಬೆಚ್ಚ’ಗೆ ಮಾಡಲಾಗಿತ್ತೊ ಎಂಬ ರಹಸ್ಯ ಲೆಕ್ಕ ಕಂಪೆನಿಗೆ ತಿಳಿದಿರಲೇಬೇಕಲ್ಲ. ಒಟ್ಟಾರೆ ಅಕ್ರಮವನ್ನು ಹಂಗಾಮಿಯಾಗಿಯಾದರೂ ಸಕ್ರಮಗೊಳಿಸುವ ಪ್ರಕ್ರಿಯೆಯ ಹಾದಿಯಲ್ಲಿ ಪಾಲಿಕೆ ಸಾಗುತ್ತಿತ್ತು ಎನ್ನಬಹುದು.

ದುರಂತ ಜರುಗದೆ ಹೋಗಿದ್ದರೆ ಅಕ್ರಮ ಫಲಕದ ಬಗ್ಗೆ ಯಾವ ಪತ್ರಿಕೆಗಳೂ ಬರೆಯುತ್ತಿರಲಿಲ್ಲ, ಯಾವ ಚಾನೆಲ್‍ಗಳೂ ಅರಚುತ್ತಿರಲಿಲ್ಲ, ಯಾವ ಕಾರ್ಪೋರೇಟರ್ರು ಏನೂ ಮಾತನಾಡುತ್ತಿರಲಿಲ್ಲ, ಪಾಲಿಕೆ ಕಳ್ಳ ನಿದ್ದೆಯಿಂದ ಎಚ್ಚರಗೊಳ್ಳುತ್ತಿರಲಿಲ್ಲ. 2023ರಲ್ಲಿ ಮುಂಬೈ ಮಹಾನಗರ ಪಾಲಿಕೆ ವಾರ್ಷಿಕ 179 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಇದರಲ್ಲಿ 100 ಕೋಟಿಯನ್ನು ಜಾಹೀರಾತು ಫಲಕಗಳಿಗೆ ಸಂಬಂಧಿಸಿದ ಮೂಲದಿಂದಲೆ ಗಳಿಸಿತ್ತು ಎಂದ ಮೇಲೆ ಹೆಣ ಬಿದ್ದರೂ (ಅಂದರೆ ಹೇಗಾದರೂ) ಹಣ ಮಾಡಬೇಕೆನ್ನುವ ಲಾಲಸೆಗೆ ಅದು ತನ್ನನ್ನು ಒಡ್ಡಿಕೊಂಡಿತ್ತು ಎನ್ನಬೇಕಲ್ಲವೆ?.

ಹೀಗೆ ನಿರ್ವಹಣಾ ವ್ಯವಸ್ಥೆಯ ಕಡುಭ್ರಷ್ಟ ಮುಖಗಳನ್ನು ಹೊರಗೆಡವಲು ಒಂದು ದೂಳಿನ ಬಿರುಗಾಳಿ ಬೀಸಬೇಕಾಯಿತು. 17 ಮಂದಿ ಜೀವ ತೆರಬೇಕಾಯಿತು. ಹೋಗಲಿ, ಈ ದುರಂತದ ಬಗ್ಗೆ ರಾಜ್ಯ ಹಾಗೂ ಒಕ್ಕೂಟ ಸರ್ಕಾರಗಳು ಹೇಗೆ ಪ್ರತಿಕ್ರಿಯಿಸಿದವು ಗೊತ್ತೆ?. ಪರಿಹಾರ ಕಾರ್ಯ 21 ತಾಸುಗಳಷ್ಟು ತಡವಾಗಿ ಶುರುವಾಯಿತು. ಇತ್ತ ಫಲಕದಡಿ ಸಿಲುಕಿದವರನ್ನು ಹೊರ ತೆಗೆಯುವ ಪ್ರಯತ್ನ ಸಾಗುತ್ತಿರುವಾಗಲೆ ಅತ್ತ ಹತ್ತಿರದ ದೊಡ್ಡ ರಸ್ತೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಮೆರವಣಿಗೆ (ರೋಡ್ ಶೋ) ಜರುಗಿತು. ಕಡೆಯ ಪಕ್ಷ ದೂರದಲ್ಲೆಲ್ಲಾದರು ಮೆರವಣಿಗೆ ನಡೆಸಬಹುದಿತ್ತು. ರಾಜ್ಯ ಸರ್ಕಾರಕ್ಕಾಗಲಿ ಅಥವಾ ಒಕ್ಕೂಟ ಸರ್ಕಾರಕ್ಕಾಗಲಿ ರವಷ್ಟು ಸಂವೇದನೆಗಳೆ ಇರಲಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಇನ್ನು ಅತಿರೇಕದ ಹವಾಮಾನ ಬದಲಾವಣೆಗಳ ಬಗ್ಗೆ ಈ ಬಗೆಯ ಸರ್ಕಾರಗಳು ಜನರನ್ನು ಎಚ್ಚರಿಸುತ್ತವೆ ಎಂದು ನಿರೀಕ್ಷಿಸುವುದು ತಮಾಷೆಯಾದೀತು.

ಘಾಟ್ಕೋಪರ್ ದುರಂತದ ನಂತರ ಇಗೋ ಮೀಡಿಯ ಕಂಪೆನಿಯ ಇನ್ನೂ ಹಲವು ಜಾಹಿರಾತು ಫಲಕಗಳನ್ನು ಕೆಡವಲಾಯಿತು. ಹಾಗೆಯೆ ಅಪಾಯಕಾರಿ ಎನ್ನಬಹುದಾದ ಫಲಕಗಳನ್ನು ಕಳಚಲಾಯಿತು. ಮುಂಬೈನಲ್ಲಿ ನಂತರ ಪುಣೆಯಲ್ಲಿ ಮೇ 18ರಂದು ಶೋಲಾಪುರ ರಸ್ತೆಯಲ್ಲಿದ್ದ ದೊಡ್ಡ ಫಲಕವೊಂದು ಬಿರುಗಾಳಿಗೆ ಬಿದ್ದು ಇಬ್ಬರು ವ್ಯಕ್ತಿಗಳು ಮತ್ತು ಒಂದು ಕುದುರೆ ಗಾಯಗೊಂಡು ಹಲವು ವಾಹನಗಳಿಗೆ ಗಂಭೀರ ಜಖಂ ಆಯಿತು. ಸಣ್ಣ ದೊಡ್ಡ ನಗರಗಳಲ್ಲಿ ಸಿಕ್ಕಸಿಕ್ಕ ಕಡೆಯಲ್ಲೆಲ್ಲ ನಿಲ್ಲಿಸಿರಬಹುದಾದ ಜಾಹೀರಾತು ಫಲಕಗಳು ಬಿರುಗಾಳಿಗೆ ತತ್ತರಿಸಿ ಬೀಳುವ ಈ ತರದ ಘಟನೆಗಳು ಇನ್ನು ಮುಂದೆ ಸಾಮಾನ್ಯ ಎನಿಸಿಲಿವೆಯೆ? ಬಹುಶಃ ಹೌದು. ಹವಾಮಾನ ಬದಲಾವಣೆ ತಂದಿರುವ ಅಸಹಜ ತಾಪ ಏರಿಕೆಯಿಂದ ಬಿರುಸು ಬಿರುಗಾಳಿಗಳ ಸಂಖ್ಯೆ ಇನ್ನು ಮುಂದೆ ಹೆಚ್ಚುತ್ತದೆ. ಜಾಹೀರಾತು ಫಲಕಗಳ ಬಗ್ಗೆ ಪ್ರತಿಯೊಂದು ನಗರವೂ ಎಚ್ಚರಿಕೆ ವಹಿಸಬೇಕಿದೆ. ವಿಪರೀತ ವಾಹನದಟ್ಟಣೆಯ ಎಡೆಗಳಲ್ಲಿ ಅವನ್ನು ನಿಲ್ಲಿಸಲೇಬಾರದು. ಅದರಲ್ಲೂ ಕಟ್ಟಡಗಳ ಟೆರೇಸ್ ಮೇಲೆ ನಿಲ್ಲಿಸಿದ ಫಲಕಗಳನ್ನು ತೆಗೆಸಿ ಹಾಕುವುದೇ ಸರಿ ಎಂದು ನನ್ನ ಅನಿಸಿಕೆ. ಪ್ರಚಾರಕ್ಕೆ ಅಂತರಜಾಲ ಇರುವಾಗ ಲೋಹದ ಫಲಕಗಳಿಗೆ ಹಣ ಸುರಿಯಬೇಕೆ?

ಮುಂಬೈ ಯಲ್ಲಿ ಬೀಸಿದ ದೂಳಿನ ಬಿರುಗಾಳಿ

ನಾವೀಗ ಮುಂಬೈಗೆ ಮರಳೋಣ. ಅರಬಿ ಕಡಲಿನ ಮೇಲ್ಮೈ ಸರಾಸರಿ ತಾಪವು ಜಾಗತಿಕ ತಾಪ ಏರಿಕೆಯಿಂದಾಗಿ ಒತ್ತರದಲ್ಲಿ ಹೆಚ್ಚುತ್ತಿರುವಾಗ ಹೆಚ್ಚೆಚ್ಚು ಸೈಕ್ಲೋನುಗಳು ಏಳುತ್ತಿವೆ. ಮುಂಬೈ ಮಹಾನಗರ ದಶಕದಿಂದೀಚೆಗೆ ಬಿರುಮಳೆ, ಬಿರುಗಾಳಿ, ಬಿರುನೆರೆಗಳನ್ನು ಮೇಲಿಂದ ಮೇಲೆ ಕಾಣುತ್ತಿದೆ. 2022ರಲ್ಲಿ ಜನವರಿ 25ರಿಂದ ಫೆಬ್ರವರಿ 26ರ ಗಡುವಿನಲ್ಲಿ ಮುಂಬೈ ಮೂರು ದೂಳಿನ ಬಿರುಗಾಳಿಗಳಿಗೆ ಸಿಲುಕಿ ಕೆಲವೇ ಅಡಿ ಎದುರಿಗಿದ್ದವರ ಮುಖಗಳನ್ನು ಗುರುತಿಸಲಾಗದಷ್ಟು ಮಬ್ಬು ಕವಿದಿತ್ತು. ಮೆಡಿಟರೇನಿಯನ್, ಕಪ್ಪು ಮತ್ತು ಕ್ಯಾಸ್ಪಿಯನ್ ಕಡಲುಗಳ ಕಡೆಯಿಂದ ಪೂರ್ವದ ಕಡೆಗೆ ಮಳೆ ಮೋಡಗಳನ್ನು ತರುವ ಗಾಳಿ((Western disturbance)) ಇರಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಮರಳುಗಾಡುಗಳ ದೂಳನ್ನು ಗೋರಿಕೊಂಡು ಭಾರತದ ಕಡೆ ಬೀಸಿ ಬರುತ್ತವೆ. ದೆಹಲಿಯಿಂದ ಮುಂಬೈವರೆಗಿನ ಹಲವು ಪ್ರದೇಶಗಳ ಮೇಲೆ ಪ್ರತೀ ವರುಷ ದೂಳಿನ ಬಿರುಗಾಳಿಗಳು ಮುತ್ತಿಗೆ ಹಾಕುತ್ತವೆ. ಅವುಗಳ ಸಂಖ್ಯೆ (frequency) ಈಗೀಗ ಹೆಚ್ಚುತ್ತಿವೆ. ಅವುಗಳಿಂದ ಸಣ್ಣಪುಟ್ಟ ಹಾನಿ ಜರುಗಿದರೂ ಹಿಂದೆಲ್ಲ ಅಷ್ಟಾಗಿ ಬಾಧಿಸದೆ ಸಹಜವೆಂಬಂತೆ ಬೀಸಿಹೋಗುತ್ತಿದ್ದ ಬಿರುಗಾಳಿಗಳು ಈಗ ವಾತಾವರಣದಲ್ಲಿ ಏರುತ್ತಿರುವ ತಾಪದ ಕಾರಣವಾಗಿ ಹೆಚ್ಚು ವೇಗ ಮತ್ತು ಬಿರುಸನ್ನು ಪಡೆಯುತ್ತಿವೆ. ಕಲ್ಪನೆಗೂ ನಿಲುಕದ ಅನಾಹುತಗಳನ್ನು ತರುತ್ತಿವೆ. ಜಾಹೀರಾತು ಫಲಕಗಳು ಸಾವಿಗೆ ಷರಾ ಬರೆಯುವ ಸನ್ನಿವೇಶಗಳನ್ನು ಹುಟ್ಟುಹಾಕುತ್ತಿವೆ. ಘಾಟ್ಕೋಪರ್ ಘಟನೆಯಿಂದ ಅರಿಯಬೇಕಾದ ವಿಚಾರಗಳು ಸಾಕಷ್ಟಿವೆ. ಹವಾಮಾನ ಬದಲಾವಣೆಯು ನಾವು ತುಳಿದಿರುವ ಅಭಿವೃದ್ಧಿ ಮಾದರಿಗಳ ಮಿತಿಯನ್ನು ಮತ್ತು ಪರಿಸರ ಸ್ನೇಹಿಯಾಗಿ ಬದುಕಬೇಕಿರುವುದರ ಮಹತ್ವವನ್ನು ನಮಗೆ ತಿಳಿಸಿಕೊಡುತ್ತಿದೆ. ಒಂದೊಂದು ನೈಸರ್ಗಿಕ ದುರಂತ ಜರುಗಿದಾಗಲೂ ನಾವು ಕಣ್ಣುಜ್ಜಿ ಆಕಳಿಸಿ ಮೈಮುರಿಯಬೇಕಿದೆ.                                     

ಕೆ.ಎಸ್. ರವಿಕುಮಾರ್, ಹಾಸನ

ವಿಜ್ಞಾನ ಬರಹಗಾರರು

ಮೊ : 8951055154

ಇದನ್ನೂ ಓದಿ-ಪರಿಸರ ಸಂರಕ್ಷಣೆ ನಮ್ಮ ಹೊಣೆ, ಶುದ್ಧತೆಗಿರಲಿ ಆದ್ಯತೆ

More articles

Latest article