‌ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಎನ್‌ ಕೌಂಟರ್‌ ನಲ್ಲಿ ಆರೋಪಿ ಫಿನಿಷ್‌

Most read

ಹುಬ್ಬಳ್ಳಿ: ಮನೆಯ ಮುಂದೆ ಆಟವಾಡುತ್ತಿದ್ದ 5  ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಭೀಕರ ಕೃತ್ಯ ಭಾನುವಾರ ವಿಜಯನಗರದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ತಪ್ಪಿಸಿಕೊಂಡು ಓಡುತ್ತಿದ್ದಾಗ ಪೊಲೀಸರ ಗುಂಡೇಟಿಗೆ ಬಲಿಯಾಗಿ ಅಸು ನೀಗಿದ್ದಾನೆ. 

ತಾರಿಹಾಳ ಬಳಿ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋದಾಗ ಆತ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಅಶೋಕನಗರದ ಪಿ ಎಸ್‌ ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಪಿಎಸ್​ಐ ಅನ್ನಪೂರ್ಣ ಅವರು ಗುಂಡು ಹಾರಿಸಿದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿ ಯಶವಂತ ಮೊರಬ ಮತ್ತು ವೀರೇಶ ಅವರೂ ಘಟನೆಯಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ 10.40ರ ಸುಮಾರಿಗೆ ಹುಬ್ಬಳ್ಳಿಯ ವಿಜಯನಗರದಲ್ಲಿ ಐದು ವರ್ಷದ ಮಗು ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿತ್ತು. ಮಗು ನಾಪತ್ತೆಯಾದ ಸ್ಥಳದ ಎದುರಿರುವ ಶೆಡ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ನಡೆಸಿದಾಗ, ಆರೋಪಿ ಕೃತ್ಯದ ಕುರಿತು ಮಾಹಿತಿ ನೀಡಿದ್ದ.

ಬಿಹಾರ ಮೂಲದ ಆತ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದ. ಹುಬ್ಬಳ್ಳಿಯಲ್ಲೂ ಕೆಲಸ ಮಾಡುತ್ತಾ, ತಾರಿಹಾಳ ಸೇತುವೆ ಬಳಿಯ ಹಳೇ ಶೆಡ್‌ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದ. ಅವನ ಜೊತೆ ಯಾರಿದ್ದಾರೆಂದು ತಿಳಿದುಕೊಳ್ಳಲು, ಅವನನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎನ್‌ಕೌಂಟರ್‌ ನಡೆದಿದೆ ಎಂದು ಶಶಕುಮಾರ್‌ ತಿಳಿಸಿದರು.

More articles

Latest article