ಹುಬ್ಬಳ್ಳಿ ಎನ್‌ ಕೌಂಟರ್: ಮೃತದೇಹ ಸುಡದೆ ರಕ್ಷಿಸಲಾಗುವುದು: ಹೈಕೋರ್ಟ್‌ ಗೆ ಸರ್ಕಾರ ಭರವಸೆ

Most read

ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾದ ಆರೋಪದಡಿಯಲ್ಲಿ ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಮೃತಪಟ್ಟ ಬಿಹಾರ ಮೂಲದ ರಿತೇಶ್ ಕುಮಾರ್‌ ಮೃತದೇಹವನ್ನು ಮುಂದಿನ ತನಿಖೆಗೆ ಅನುಕೂಲವಾಗುವಂತೆ ಸುಡದೆ ಸಮಾಧಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ, ‘ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್–ಕರ್ನಾಟಕ’ (ಪಿಯುಸಿಎಲ್) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಇ.ಶುಜಾಯುತ್‌ ಉಲ್ಲಾ ಮತ್ತು ಬೆಂಗಳೂರಿನ ಮಧುಭೂಷಣ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಮುಂದಿನ ತನಿಖೆಗೆ ಅನುಕೂಲವಾಗುವಂತೆ ಸಮಾಧಿ ಮಾಡಲಾಗುವುದು ಎಂದು ತಿಳಿಸಿದರು.

ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ಒದಗಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಅರ್ಜಿಯಲ್ಲಿ ಏನಿದೆ?: ಪೊಲೀಸರು ತಾವೇ ಸ್ವತಃ ನ್ಯಾಯಾಧೀಶರಾಗಿ, ಈ ರೀತಿ ನ್ಯಾಯ ದಂಡನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ಬಾಲಕಿ ಮತ್ತು ಎನ್‌ ಕೌಂಟರ್‌ ಗೆ ಗುರಿಯಾಗಿರುವ ವ್ಯಕ್ತಿಯ ಮೃತದೇಹಗಳನ್ನು ಸಂರಕ್ಷಿಸಿ ಇರಿಸಬೇಕು. ಶವಪರೀಕ್ಷೆಗಾಗಿ ದೆಹಲಿ ಅಥವಾ ಕರ್ನಾಟಕ ಹೊರತುಪಡಿಸಿದ ಅನ್ಯ ರಾಜ್ಯಗಳ ಶಸ್ತ್ರಚಿಕಿತ್ಸಕರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಸ್ವತಂತ್ರವಾದ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ಈ ತನಿಖಾ ತಂಡವು ಕೋರ್ಟ್‌ ನಿಗಾದಲ್ಲಿ ಇರುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

More articles

Latest article