ಬೆಳಗಾವಿ: ಹುಬ್ಬಳ್ಳಿಯಲ್ಲಿ ಭಾನುವಾರ ಅತ್ಯಾಚಾರ ಯತ್ನ, ಕೊಲೆ ಆರೋಪಿ ರಿತೇಶಕುಮಾರ್ ಅವರನ್ನು ಗುಂಡಿಕ್ಕಿ ಕೊಂದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಿಫಾರಸು ಮಾಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂದರು.
ಹುಬ್ಬಳ್ಳಿ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಕ್ಕಾಗಿ ಅನ್ನಪೂರ್ಣ ಅವರನ್ನು ಅಭಿನಂದಿಸುತ್ತೇನೆ. ಅವರ ನಡೆ ಬೇರೆ ಅಧಿಕಾರಿಗಳಿಗೆ ದಾರಿದೀಪವಾಗಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದಂಥ ಪಿಡುಗು ಸಮಾಜದಿಂದ ನಿರ್ಮೂಲನೆಯಾಗಬೇಕು. ನಮ್ಮ ಇಲಾಖೆಯಿಂದ ಸರ್ಕಾರಿ ನೌಕರರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ನೀಡುವುದಿಲ್ಲ. ಒಂದುವೇಳೆ ಸರ್ಕಾರಿ ನೌಕರರಿಗೂ ಪ್ರಶಸ್ತಿ ನೀಡಿದರೆ, ಅನ್ನಪೂರ್ಣ ಮೊದಲಿಗರಾಗಿರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ’ ಎಂಬ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಹೆಬ್ಬಾಳಕರ, ‘ಹುಬ್ಬಳ್ಳಿ ಘಟನೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ನಾನು ಬೇರೆ ರಾಜ್ಯದ ಹೋಲಿಕೆ ಮಾಡಲು ಹೋಗುವುದಿಲ್ಲ. ಆದರೆ, ನಮ್ಮಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿಲ್ಲ. ನಮ್ಮ ಬಗ್ಗೆ ಆರೋಪಿಸುತ್ತಿರುವ ಬಿಜೆಪಿಯವರು ಮಣಿಪುರದ ಕಡೆ ಒಮ್ಮೆ ನೋಡಲಿ. ಅಲ್ಲಿಗೆ ಪ್ರಧಾನಿ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಇಡೀ ದೇಶದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಅವರು ನೋಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು.
ಜಾತಿ ಗಣತಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಹೆಬ್ಬಾಳಕರ, ‘ಜಾತಿ ಗಣತಿಗೆ ಎಂದಿಗೂ ನಮ್ಮ ವಿರೋಧವಿಲ್ಲ. ಆದರೆ, ಈಗ ವೀರಶೈವ ಮತ್ತು ಲಿಂಗಾಯತರನ್ನು ಪ್ರತ್ಯೇಕವಾಗಿ ಗಣತಿ ಮಾಡಲಾಗಿದೆ. ಕಳೆದ 20 ವರ್ಷಗಳಲ್ಲಿ ಎಲ್ಲ ಜಾತಿಗಳಲ್ಲಿ ಜನರು ಹೆಚ್ಚಾಗಿದ್ದಾರೆ. ಆದರೆ, ವೀರಶೈವ ಮತ್ತು ಲಿಂಗಾಯತರ ಜನಸಂಖ್ಯೆ ಒಡೆದು ಹೋಗಿದ್ದರಿಂದ ನಮ್ಮ ಅಂಕಿ–ಅಂಶ ಕಡಿಮೆ ಕಾಣಿಸುತ್ತಿದೆ. ಹಾಗಾಗಿ ಇನ್ನೊಮ್ಮೆ ವೀರಶೈವ–ಲಿಂಗಾಯತ ಸೇರಿಸಿ ಒಟ್ಟಾಗಿ ಜಾತಿ ಗಣತಿ ಮಾಡಬೇಕು ಎಂದು ಹೇಳಿದರು.
ನಿಪ್ಪಾಣಿಗೆ ಅಂಬೇಡ್ಕರ್ ಭೇಟಿ ನೀಡಿದ ಘಳಿಗೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯವರು ಸಮಾವೇಶ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದಲೂ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುತ್ತೀರಾ’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ಶ್ರದ್ಧಾ, ಭಕ್ತಿಯಿಂದ ನಂಬಿದೆ. ನಾವೆಲ್ಲರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ನಿಪ್ಪಾಣಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸರ್ಕಾರದಿಂದ ನಾವೂ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ನಮ್ಮ ವಿರುದ್ಧ ಎರಡಲ್ಲ; ನಾಲ್ಕನೇ ಸುತ್ತಿನ ಜನಾಕ್ರೋಶ ಯಾತ್ರೆ ಮಾಡಿದರೂ, ಜನರಿಗೆ ಅವರ ಮೇಲಿನ ಆಕ್ರೋಶ ಕಡಿಮೆಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.