ಹುಬ್ಬಳ್ಳಿ : ಅವಳಿ ನಗರದ ಸಂಚಾರ ವ್ಯವಸ್ಥೆಯ ಸಂಪೂರ್ಣ ಸುಧಾರಣೆಗೆ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ .ಶಶಿಕುಮಾರ್ ಹೇಳಿದ್ದಾರೆ. ಪತ್ರಕರ್ತರ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತವಾಗಿ ಮಾತನಾಡಿದ ಅವರು, ಸಂಚಾರಿ ವ್ಯವಸ್ಥೆ ಸುಧಾರಿಸಲು ಐಐಟಿ, ಬಿವ್ಹಿಬಿ, ಎಸ್’ಡಿಎಂ ಇಂಜಿನಿಯರಿಂಗ್ ಕಾಲೇಜು ನೇತೃತ್ವದಲ್ಲಿ ಯೋಜನೆ ರೂಪಿಸಿ ಸರ್ಕಾರದಿಂದ ಅನುದಾನ ಕೇಳಲಾಗುವುದು. ತದನಂತರ ಸಂಚಾರಿ ನಿಯಮಗಳ ಪಾಲನೆ ಮತ್ತು ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಅವಳಿನಗರದಲ್ಲಿನ ಸಂಚಾರಿ ವ್ಯವಸ್ಥೆ ಬಗ್ಗೆ ತಮಗೂ ತೃಪ್ತಿಯಿಲ್ಲ. ಇಲ್ಲಿ ಅಭಿವೃದ್ಧಿ ಕಾಮಗಾರಿ, ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸುಧಾರಣೆ ನಿಶ್ಚಿತ ಎಂದರು.
ಅವಳಿ ನಗರದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದ್ದು ಕಳೆದ 6 ತಿಂಗಳಲ್ಲಿ 6 ಅಂತಾರಾಜ್ಯ ಕುಖ್ಯಾತ ಕಳ್ಳರು ಮತ್ತು ದರೋಡೆಕೋರರ ಗ್ಯಾಂಗ್ ಅನ್ನು ಬಂಧಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಸುಮಾರು 16 ಕೋಟಿ ಹಣವನ್ನು ಅವಳಿ ನಗರದ ಜನತೆ ಕಳೆದುಕೊಂಡಿದ್ದಾರೆ. ಹಾಗಾಗಿ ಸಾರ್ವಜನಿಕರು ಸೈಬರ್ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದರು.
ಅವಳಿ ನಗರದಲ್ಲಿ ಅಪರಾಧಗಳನ್ನು ತಗ್ಗಿಸುವ ಹಾಗೂ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಜರುಗಿಸಿದ್ದೇವೆ. ಡ್ರಗ್ಸ್ ಹಾಗೂ ಗಾಂಜಾ ಪ್ರಕರಣದಲ್ಲಿ ಬಹುತೇಕರನ್ನು ತಪಾಸಣೆಗೆ ಒಳಪಡಿಸಿದಾಗ ಶೇ.45ರಷ್ಟು ಗಾಂಜಾ ಹಾಗೂ ಡ್ರಗ್ಸ್ ಸೇವನೆ ಮಾಡಿರುವ ಪ್ರಕರಣಗಳು ಕಂಡು ಬಂದಿವೆ. ಅವಳಿ ನಗರದಲ್ಲಿ ಸುಮಾರು 25 ರೌಡಿ ಗ್ಯಾಂಗ್‌ಗಳಿವೆ. ಯಾರೇ ಅಪರಾಧ ಮಾಡಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಾಚರಣೆ ನಿರಂತರವಾಗಿರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವಳಿ ನಗರದ ಬೀಟ್ ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು. ಫೈರಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ ಯಾವುದೇ ಅಪರಾಧ ಮಾಡಿದ ಆರೋಪಿಯನ್ನು ಬಂಧಿಸುವುದು ಪೊಲೀಸರ ಮುಖ್ಯ ಕರ್ತವ್ಯ. ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಅಂಗನವಾಡಿ ಆಹಾರ ಸಂಗ್ರಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ಇವರ ಶೋಧ ಪ್ರಕ್ರಿಯೆ ನಿರಂತರವಾಗಿದೆ. ಬಂಧನ ಮಾಡದಂತೆ ಯಾರೂ ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.