ಎಚ್‌ಎಸ್‌ಆರ್‌ಪಿ; ಡಿ.4 ರವರೆಗೆ ಕ್ರಮ ಬೇಡ, ಹೈ ಕೋರ್ಟ್ ಆದೇಶ

Most read

ಬೆಂಗಳೂರು: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ) ಅಳವಡಿಸದೇ ಇರುವ ವಾಹನ ಮಾಲೀಕರು ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಡಿಸೆಂಬರ್ 4 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಎಚ್‌ಎಸ್‌ಆರ್‌ಪಿ ಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ರಾಜ್ಯ ಸರ್ಕಾರ ಮಧ್ಯಂತರ ಆದೇಶವನ್ನು ಚಾಲ್ತಿಯಲ್ಲಿ ಇರಿಸಿ, ಏಕಸದಸ್ಯ ನ್ಯಾಯಪೀಠವೇ ಪ್ರಕರಣ ನಿರ್ಧರಿಸಬಹುದು ಎಂಬ ಅಡ್ವೊಕೇಟ್ ಜನರಲ್ ಸಲಹೆಯ ಬಗ್ಗೆ ಪರಿಶೀಲಿಸಬೇಕಿದೆ ಎಂದರು.

ಇದಕ್ಕೆ ಪ್ರತಿಯಾಗಿ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರೆಸಬಹುದು. ಜೊತೆಗೆ, ಏಕಸದಸ್ಯ ಪೀಠವೇ ಪ್ರಕರಣದ ಕುರಿತಂತೆ ನಿರ್ಧರಿಸಲು ಆದೇಶಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.

ಎಚ್‌ಎಸ್‌ಆರ್‌ಪಿ ಫಲಕಗಳನ್ನು ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರವೇ ಅಳವಡಿಸಬೇಕು ಎಂದು ಸಾರಿಗೆ ಇಲಾಖೆ 2023 ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಮತ್ತು 2023ರ ಆಗಸ್ಟ್ 18ರ ಸುತ್ತೋಲೆಗೆ ತಡೆ ನೀಡಲು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿತ್ತು.  2023ರ ಸೆಪ್ಟೆಂಬರ್ 20 ರಂದು ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಸೂರತ್‌ನ ಬಿಎನ್‌ಡಿ ಎನರ್ಜಿ ಪ್ರೈವೆಟ್ ಲಿಮಿಟೆಡ್ ಸೇರಿದಂತೆ ಇತರ ಮೂರು  ಕಂಪನಿಗಳು ಈ ಮೇಲ್ಮನವಿ ಸಲ್ಲಿಸಿವೆ.

More articles

Latest article