ಸ್ವಯಂ ತಿರಸ್ಕಾರದಿಂದ ಹೊರಬರುವುದು ಹೇಗೆ?

Most read

ಮನುಷ್ಯನ ಮನಸು ನೆಗೆಟೀವ್ ವಿಷಯಗಳು, ನೆಗೆಟೀವ್ ಟೀಕೆಗಳಿಗೆ ಸ್ಪಂದಿಸಿ ತನ್ನೊಳಗೆ ಇರಿಸಿಕೊಳ್ಳುವಷ್ಟು ತನ್ನ ಸುತ್ತಮುತ್ತಲಿನ ಪಾಸಿಟೀವ್ ವಿಷಯಗಳನ್ನು‌ ಗಮನಿಸುವುದಿಲ್ಲ. ಆ ಮನಸಿಗೆ ಸರಿಯಾದ ತರಬೇತಿ ಕೊಡುವುದರ ಮೂಲಕ ನಮ್ಮ ಪಾಸಿಟೀವ್ ವಿಷಯಗಳನ್ನು ಸಂಭ್ರಮಿಸಿ ನಮ್ಮೊಳಗಿನ ಕೊರತೆಗಳಿಗೆ ಕೊರಗುವುದರ ಬದಲು ನಮ್ಮ ವ್ಯಕ್ತಿತ್ವವನ್ನು ಉನ್ನತೀಕರಣಗೊಳಿಸಬಹುದು – ಡಾ. ರೂಪಾ ರಾವ್‌, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

“Accept yourself as it is” ಈ ವಾಕ್ಯ ಕೇಳಲು ಬಹಳ ಇಂಪು, ಚೆಂದ ಆದರೆ ಇದು ನಿಜಕ್ಕೂ ಸಾಧ್ಯವೇ?

ಯಾವಾಗ ನಮ್ಮನ್ನು ನಾವು ಒಪ್ಪಿಕೊಳ್ಳುವುದಿಲ್ಲ?  ನಾವು ಲೋಕ ನಮ್ಮನ್ನು  ಬಯಸಿದಂತೆ ಇಲ್ಲ ಅಥವಾ ನಾವು ಇನ್ನೊಬ್ಬರಂತೆ ಇಲ್ಲ, ಅಥವಾ ನಾವು ಬಯಸಿದ ಸ್ಟಾಂಡರ್ಡ್‌ಗೆ ನಾವಿಲ್ಲ  ಇಂತಹ ಕಾರಣಗಳಿಂದ ನಮ್ಮನ್ನು ನಾವು ಒಪ್ಪಿಕೊಳ್ಳುವುದಿಲ್ಲ ‌.

ಉದಾಹರಣೆಗೆ, ಮಾರ್ವಾಡಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಸಹಜವಾಗಿಯೇ ಬೆಳ್ಳಗೆ ತೆಳ್ಳಗೆ, ಲೋಕದ ಸ್ಟಾಂಡರ್ಡ್ ಪ್ರಕಾರ ಸುಂದರವಾಗಿರುತ್ತಾರೆ‌. ಅವರ ನಡುವೆ ಕೊಂಚ‌ ಬಣ್ಣ ಕಡಿಮೆ‌ ಆದ ಹೆಣ್ಣು ಹುಟ್ಟಿದರೆ ಇತರ ಹೆಣ್ಣುಗಳಂತೆ ತಾನಿಲ್ಲ ಎಂಬುದು  ಅವಳಿಗೆ ಕೀಳರಿಮೆ ಬರಲಾರಂಭಿಸುತ್ತದೆ. ‌ಆ ಕೀಳರಿಮೆ ತನ್ನ ಬಗ್ಗೆ ತಾನೇ ಇಷ್ಟವಿಲ್ಲ ಎಂಬ ಭಾವನೆ ತರುತ್ತದೆ.  ಅಲ್ಲಿಗೆ ಆ ಹೆಣ್ಣು ತನ್ನನ್ನು ತಾನೇ‌ ರಿಜೆಕ್ಟ್ ಮಾಡಿಕೊಂಡು ಬಿಡುತ್ತಾಳೆ. ಅಲ್ಲಿ ಆತ್ಮವಿಶ್ವಾಸದ ಕೊರತೆ ಕಾಡುತ್ತದೆ‌. ಅವಳು ತಾನು ಎಲ್ಲೂ ಸಲ್ಲದವಳು ಎಂದು ಭಾವಿಸಿಬಿಡುತ್ತಾಳೆ.

ತನ್ನ ಗೆಳೆಯ ಗೆಳತಿಯರೆಲ್ಲಾ ಪ್ರತಿಷ್ಠಿತ ಕಾಲೇಜುಗಳಿಗೆ ಸೇರಿದರು, ತಾನು ಮಾತ್ರ ಕಡಿಮೆ ‌ಅಂಕ ಗಳಿಸಿ‌ ಎರಡನೇ ಟೈರ್  ಕಾಲೇಜಿಗೆ  ಸೇರಿದೆ ಎಂದು ಭಾವಿಸಿದ ಹುಡುಗ‌ ತನ್ನ ಗುಣ, ಸ್ವಭಾವ  ಎಲ್ಲವನ್ನೂ ಪಕ್ಕಕ್ಕಿಟ್ಟು ತನ್ನನ್ನು ತಾನು ತಿರಸ್ಕರಿಸಿಕೊಳ್ಳುತ್ತಾನೆ. ಅಲ್ಲಿಂದ ಓದಿ ಏನು ಮಾಡಬೇಕು ಎಂದು ಸ್ವ ನಾಶಕ್ಕೆ ತೊಡಗುತ್ತಾನೆ

ತಾನು ಇಷ್ಟ ಪಟ್ಟ ಹುಡುಗಿ ತನ್ನನ್ನು ಇಷ್ಟಪಡಲಿಲ್ಲ ಎಂಬ ಕಾರಣಕ್ಕೆ ಕೀಳರಿಮೆ ಬೆಳೆಸಿಕೊಂಡ ಹುಡುಗ ಮುಂದೆ ಯಾರನ್ನೂ ಪ್ರೊಪೋಸ್ ಮಾಡುವ ಧೈರ್ಯಕ್ಕೇ ಕೈ‌ಹಾಕುವುದಿಲ್ಲ.

ಮೇಲಿನ ಎಲ್ಲಾ  ಉದಾಹರಣೆಗಳಲ್ಲಿಯೂ ತಮ್ಮನ್ನು ತಾವು ರಿಜೆಕ್ಟ್ ಮಾಡಿಕೊಂಡವರೇ .

ಚಿತ್ರ: ಗೂಗಲ್

“ ಬೇರೆಯವರು ನೀನು ಯಾಕೆ‌ ಹೀಗಿದ್ಯಾ ಅಂತ ಕೇಳುವುದು  ನಿನ್ನಲ್ಲಿ ಅಳು ತರಿಸ್ತಿದೆ, ಏಕೆಂದರೆ ನೀನು ಅದೇ ಮಾತನ್ನು ನಿನಗೆ ನೀನೇ ಹೇಳಿಕೊಳ್ಳುತ್ತಿದ್ದೀಯಾ, ಬೇರೆಯವರು ನಿನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೋ ಇಲ್ಲವೋ ಇತರರು ನಿನ್ನ ಬಗ್ಗೆ ತಮಾಷೆ ಮಾಡುತ್ತಿದ್ದಾರೆಯೋ ಇಲ್ಲವೋ ಅದನ್ನು ನೀನೇ ನಿನಗೆ ಮಾಡಿಕೊಳ್ತಿದ್ದೀಯ, ಆದ್ದರಿಂದಲೇ ಈ ಬ್ಯೂಟಿ ಅನ್ನೋದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ನಿನಗೆ” ನನ್ನ ಕ್ಲೈಂಟ್ ಒಬ್ಬರಿಗೆ ನಾ ಹೇಳಿದ್ದು ಇವತ್ತು ‌.

ಸ್ವಯಂ ತಿರಸ್ಕಾರ ನಿಲ್ಲಿಸುವುದು ಹೇಗೆ?

1. ಸ್ವಯಂ-ತಿರಸ್ಕರಿಸುವ ಆಲೋಚನೆಗಳನ್ನು ಗುರುತಿಸಿ: ನಕಾರಾತ್ಮಕ ಸ್ವ-ಮಾತು( ಸೆಲ್ಫ್ ಟಾಕ್) ಅಥವಾ ಸ್ವಯಂ-ಅನುಮಾನದ ( ಸೆಲ್ಫ್ ಡೌಟ್ ಮಾದರಿಗಳನ್ನು ನಿಮ್ಮ ಮಾತುಗಳಲ್ಲಿ, ಆಲೋಚನೆಯಲ್ಲಿ ಗಮನಿಸಿ. ಉದಾಹರಣೆಗೆ ನಾನು ಕಪ್ಪಗಿದ್ದೇನೆ, ದಪ್ಪಗಿದ್ದೇನೆ ಇತ್ಯಾದಿ. ಹಾಗೇ   ಈ ಆಲೋಚನೆಗಳು ಯಾವಾಗ ಮತ್ತು ಏಕೆ ಉದ್ಭವಿಸುತ್ತವೆ ಎಂಬುದನ್ನೂ ಬರೆದಿಟ್ಟುಕೊಳ್ಳುವುದು.

2. ನಕಾರಾತ್ಮಕ ನಂಬಿಕೆಗಳನ್ನು ಸವಾಲು ಮಾಡಿ: ಒಮ್ಮೆ ನೀವು ಸ್ವಯಂ-ತಿರಸ್ಕರಿಸುವ ಆಲೋಚನೆಗಳನ್ನು ಗಮನಿಸಿದರೆ, ಅವುಗಳ ಸಿಂಧುತ್ವವನ್ನು( ನಿಜವೇ ಸುಳ್ಳೇ) ಪ್ರಶ್ನಿಸಿ. ಈ ನಂಬಿಕೆಗಳನ್ನು ಬೆಂಬಲಿಸುವ ಯಾವುದೇ ಸಾಕ್ಷಿಗಳಿವೆಯೇ ಅಥವಾ ಅವು ಭಯ ಅಥವಾ ಅಭದ್ರತೆಯ ಭಾವನೆಗಳ ಪರಿಣಾಮವೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಉದಾಹರಣೆಗೆ  ಚೆಂದವಿಲ್ಲ, ದೊಡ್ಡ, ಬಡವ, ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ, ಇಂತಹವುಗಳು ನಿಮ್ಮ ಅನಿಸಿಕೆಯೇ, ನೀವು ಇವುಗಳನ್ನು ಯಾರೊಂದಿಗೆ‌ ಹೋಲಿಸಿಕೊಳ್ಳುತ್ತಿದ್ದೀರಿ ಎಂದು  ಪರೀಕ್ಷಿಸಿ, ಬಹಳ ಸಲ ನಮ್ಮ ಅನಿಸಿಕೆಗಳು ಇತರರೊಂದಿಗೆ ಹೋಲಿಕೆ ಮಾಡಿ ಹುಟ್ಟಿದವುಗಳಾಗಿರುತ್ತವೆ.

3. ಸ್ವಾನುಕಂಪವನ್ನು( ( be kindful to yourself ) ಅಭ್ಯಾಸ ಮಾಡಿ: ನೀವು ಸ್ನೇಹಿತರಿಗೆ ನೀಡುವ ಅದೇ ಅನುಕಂಪ ಮತ್ತು ತಿಳುವಳಿಕೆಯೊಂದಿಗೆ ನಿಮ್ಮನ್ನು ನೋಡಿ. ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ. ಪ್ರತಿಯೊಬ್ಬರಲ್ಲೂ ನ್ಯೂನತೆಗಳಿವೆ ಎಂಬುದನ್ನು ಮೊದಲು ಅರಿಯಿರಿ ; ಈ ನ್ಯೂನತೆ ಅಥವಾ ಕೊರತೆ ನಿಮ್ಮ ಮೌಲ್ಯವನ್ನು  ನಿರ್ಧರಿಸಲಾರದು.  ನೀವು ಕಪ್ಪಗೋ ತೆಳ್ಳಗೋ, ದಪ್ಪಗೋ ಅಥವಾ ಬೆಳ್ಳಗೋ ಇರುವುದರಿಂದ ನಿಮ್ಮ ಮೌಲ್ಯ ಹೆಚ್ಚಾಗುವುದಿಲ್ಲ, ಅಥವಾ ಕಡಿಮೆಯೂ ಆಗುವುದಿಲ್ಲ, ಸಕಾರಾತ್ಮಕ ವ್ಯಕ್ತಿತ್ವ ಹಾಗು ನಾವು ನಮ್ಮನ್ನು ಹೇಗೆ ನೋಡುತ್ತೇವೆ ಅನ್ನುವುದು ನಮ್ಮ ಸೆಲ್ಫ್ ವರ್ತ್ ಗೆ ಕಾರಣವಾಗುತ್ತದೆ‌

4. ನಿಮ್ಮದೇ ಆದ ವಿಭಿನ್ನ ಹಾಗು ವಿಶಿಷ್ಟ ಸಾಮರ್ಥ್ಯಗಳನ್ನು ಪಟ್ಟಿ ಮಾಡಿ : ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ನಿಯಮಿತವಾಗಿ ನೆನಪಿಸಿಕೊಳ್ಳಿ. ಸಕಾರಾತ್ಮಕ ಹೇಳಿಕೆಗಳನ್ನು ಬರೆಯಿರಿ ಅಥವಾ ನಿಮ್ಮ ಬಗ್ಗೆ ನೀವು ಇಷ್ಟಪಡುವ ವಿಷಯಗಳ ಜರ್ನಲ್( ದಿನ ಬರೆಯುವ ಡೈರಿ) ಅನ್ನು ಇರಿಸಿ. 

5. ಆರೋಗ್ಯಕರ ಗಡಿಗಳನ್ನು ನಿಗದಿಗೊಳಿಸಿ: ನಿಮ್ಮನ್ನು ಅನರ್ಹ ಅಥವಾ ನಿಮ್ಮ ಸೆಲ್ಫ್ ವರ್ತ್ ಅನ್ನು ಕಡಿಮೆಗೊಳಿಸುವ ಸಂದರ್ಭಗಳು ಅಥವಾ ಜನರಿಗೆ ನೇರವಾಗಿ ನೋ ಎಂದು ಹೇಳಲು ಕಲಿಯಿರಿ. ಇಂತಹ ಜನರನ್ನು ಮಾನಸಿಕ ಹಾಗು ದೈಹಿಕವಾಗಿ ದೂರವಿಡುವುದು  ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಒಳ್ಳೆಯದು

6. ಬೆಂಬಲವನ್ನು ಹುಡುಕುವುದು: ಧನಾತ್ಮಕ ಮನೋಭಾವದ ಜನರನ್ನು ನಿಮ್ಮ ಸುತ್ತ ಇರಿಸಿಕೊಳ್ಳಿ  – ನಿಮ್ಮನ್ನು ಮೆಚ್ಚುವ ಮತ್ತು ನಿಮ್ಮ ನಿಜವಾದ ಗುಣಗಳನ್ನು ಗುರುತಿಸುವ ಜನರು ಅವರು‌  ಅಗತ್ಯಬಿದ್ದರೆ, ನಿಮ್ಮ ಸ್ವಯಂ-ತಿರಸ್ಕಾರಕ್ಕೆ ಕಾರಣವಾಗುವ ಆಧಾರವಾಗಿರುವ ಸಮಸ್ಯೆಗಳ ಮೇಲೆ  ಕೌನ್ಸೆಲಿಂಗ್ ಗೆ ಹೋಗಬಹುದು.

7. ಅಪರಿಪೂರ್ಣತೆಯನ್ನು ಸಂಭ್ರಮಿಸಿ: ಎಲ್ಲದರಲ್ಲೂ ಪರಿಪೂರ್ಣತೆಯನ್ನು ಸಾಧಿಸಲಾಗುವುದಿಲ್ಲ ಎಂದು ಒಪ್ಪಿಕೊಳ್ಳಿ.

8. ನಿಮ್ಮ ವ್ಯಕ್ತಿತ್ವಕ್ಕೆ ಹಾಗು ವ್ಯಕ್ತಿಗತ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಿ: ನಿಮ್ಮ ಕೊರತೆಗಳಿಗಾಗಿ ನಿಮ್ಮನ್ನೇ ತಿರಸ್ಕರಿಸಿಕೊಳ್ಳುವ  ಬದಲು, ಸ್ವಂತ ಬೆಳವಣಿಗೆ ಮತ್ತು ಸ್ವಯಂ-ಸುಧಾರಣೆಯ ಮೇಲೆ ಗಮನ ಕೇಂದ್ರೀಕರಿಸಿ. ತಪ್ಪುಗಳನ್ನು  ಕಲಿಯುವ ಅವಕಾಶಗಳಾಗಿ ನೋಡಿ.

ಚಿತ್ರ: ಗೂಗಲ್

ಈ ಅಭ್ಯಾಸಗಳನ್ನು  ಸತತವಾಗಿ ಅಳವಡಿಸಿಕೊಂಡಾಗ, ಸ್ವಯಂ-ನಿರಾಕರಣೆಯಿಂದ ಸ್ವಯಂ-ಸ್ವೀಕಾರಕ್ಕೆ ಬದಲಾಗಲು ನಿಮಗೆ ಸಹಾಯ ಮಾಡಬಹುದು.

ಮನುಷ್ಯನ ಮನಸು ನೆಗೆಟೀವ್ ವಿಷಯಗಳು, ನೆಗೆಟೀವ್ ಟೀಕೆಗಳಿಗೆ ಸ್ಪಂದಿಸಿ ತನ್ನೊಳಗೆ ಇರಿಸಿಕೊಳ್ಳುವಷ್ಟು ತನ್ನ ಸುತ್ತಮುತ್ತಲಿನ ಪಾಸಿಟೀವ್ ವಿಷಯಗಳನ್ನು‌ ಗಮನಿಸುವುದಿಲ್ಲ. ಆ ಮನಸಿಗೆ ಸರಿಯಾದ ತರಬೇತಿ ಕೊಡುವುದರ ಮೂಲಕ ನಮ್ಮ ಪಾಸಿಟೀವ್ ವಿಷಯಗಳನ್ನು ಸಂಭ್ರಮಿಸಿ ನಮ್ಮೊಳಗಿನ ಕೊರತೆಗಳಿಗೆ ಕೊರಗುವುದರ ಬದಲು ನಮ್ಮ ವ್ಯಕ್ತಿತ್ವ ವನ್ನು ಉನ್ನತೀಕರಣಗೊಳಿಸಬಹುದು.

ಡಾ ರೂಪಾ ರಾವ್,

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990

ಇದನ್ನೂ ಓದಿ- ಸುಪ್ತ ಮನಸಿನ ಸುಪ್ತ ಶಕ್ತಿ

More articles

Latest article