ಕೇಂದ್ರ ರಾಜ್ಯಗಳ ಸಂಬಂಧ ಹೇಗಿರಬೇಕು?: ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಿದ ತಮಿಳುನಾಡು ಸಿಎಂ ಸ್ಟಾಲಿನ್‌

Most read

ಚೆನ್ನೈ: ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹೇಗಿರಬೇಕೆಂದು ತಮಿಳುನಾಡು ಸರ್ಕಾರ ಸಿದ್ಧಪಡಿಸಿರುವ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದಿದ್ದಾರೆ.

ಸ್ಟಾಲಿನ್‌ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹೇಗಿರಬೇಕು ಎಂದು ತಿಳಿಸಲು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿದೆ. ಭಾರತೀಯ ಕಡಲಯಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಅಶೋಕ ವರ್ಧನ್ ಶೆಟ್ಟಿ, ತಮಿಳುನಾಡು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಅವರೂ ಈ ಸಮಿತಿ ಸದಸ್ಯರಾಗಿದ್ದಾರೆ.

ಆಗಸ್ಟ್‌ 23ರಂದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಆ ಸಮಾವೇಶದಲ್ಲಿ ಈ ಪ್ರಶ್ನಾವಳಿ ಬಿಡುಗಡೆ ಮಾಡಲಾಗಿದ್ದು, ಉನ್ನತ ಸಮಿತಿಗೆ ಮತ್ತಷ್ಟು ಮಾಹಿತಿ ಒದಗಿಸುವ ಉದ್ದೇಶದಿಂದ  ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಂದ ಆನ್‌ ಲೈನ್‌ ಮೂಲಕ ಪ್ರತಿಕ್ರಿಯೆಗಳನ್ನು ಕೇಳಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿರುವ ಸರಣಿ ತಿದ್ದುಪಡಿಗಳಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಅನುಕೂಲಕರವಾಗಿವೆ ಎಂದು ಸ್ಟಾಲಿನ್‌ ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದ ಪ್ರಮುಖ ಪ್ರಶ್ನೆಗಳು ಹೀಗಿವೆ:

ಹಣಕಾಸು ಆಯೋಗದ ಮುಖಾಂತರ ಕಠಿಣ ನಿಬಂಧನೆಗಳನ್ನು ಹೇರಲಾಗುತ್ತಿದ್ದು,  ರಾಜ್ಯಗಳಿಗೆ ಕಟ್ಟಪ್ಪಣೆ ಮಾಡುವ ರೀತಿಯಲ್ಲಿವೆ. ಬೃಹತ್‌ ಸಚಿವಾಲಯಗಳು ಕೇಂದ್ರದ ಮಟ್ಟದಲ್ಲಿದ್ದು, ಇವುಗಳು ರಾಜ್ಯ ಸರ್ಕಾರಗಳ ಕಾರ್ಯವನ್ನೇ ನಕಲು ಮಾಡುತ್ತಿವೆ. ಇದು ಸರಿಯೇ?

ಕೇಂದ್ರ ಸರ್ಕಾರ ಪುರಸ್ಕೃತ ಎಲ್ಲ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಅನುಮೋದನೆಯಿಂದ ಹಿಡಿದು ಅನುಷ್ಠಾನದವರೆಗೆ ಪ್ರತಿ ಹಂತದಲ್ಲೂ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ.

ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚೌಕಟ್ಟನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ದೇಶದ ಎಲ್ಲ ಮುಖ್ಯಮಂತ್ರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ವಬೆಂವಣಿಗೆಗಳನ್ನು ಕುರಿತು ಗಂಭೀರವಾಗಿ ಆಲೋಚಿಸಬೇಕು.

More articles

Latest article