ಬೆಂಗಳೂರು: ಬಿಗ್‌ಬಾಸ್ ಸ್ಪರ್ಧೆಯಲ್ಲಿ ಹಾಡುಗಾರ ಹನುಮಂತ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಅವರಿಗೆ 50 ಲಕ್ಷ ರೂ. ನಗದು ಬಹುಮಾನವೂ ದಕ್ಕಿದೆ. ಆದರೆ ನಿಜಕ್ಕೂ 50 ಲಕ್ಷ ರೂ. ಪೂರ್ಣ ಹಣ ಹನುಮಂತ ಅವರ ಕೈ ಸೇರಲಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ.
ನಗದು ಬಹುಮಾನಕ್ಕೆ ಶೇ.30 ರಷ್ಟು ಉಡುಗೊರೆ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಹನುಮಂತುಗೆ ಸಿಗುವ ಬಹುಮಾನದಲ್ಲಿ ಶೇ.30 ರಷ್ಟು ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ತೆರಿಗೆ ಹಣವನ್ನು ಬಹುಮಾನ ನೀಡುವ ಸಂಸ್ಥೆಯೇ ಕಡಿತ ಮಾಡಿ ವಿಜೇತರಿಗೆ ನೀಡುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋ, ಲಾಟರಿ ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸುತ್ತದೆ. ಜತೆಗೆ ವಿಜೇತರು ಶೇ.1ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ ಶೇ.31.2ಕ್ಕೆ ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು ರೂ. 10 ಲಕ್ಷ ಕ್ಕಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ ಶೇ. 10 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಒಟ್ಟು ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಈ ಎಲ್ಲ ತೆರಿಗೆಗಳು ಕಡಿತಗೊಂಡು ಹನುಮಂತ ಅವರಿಗೆ 34,40,000 ರೂ. ನಗದು ಸಿಗಬಹುದು.
ಇಷ್ಟೇನಾ ಎಂದು ಅಂದುಕೊಳ್ಳುವಂತಿಲ್ಲ. ಬಿಗ್ ಬಾಸ್ ಸೇರಿದಂತೆ ಯಾವುದೇ ಶೋಗಳಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದು ಮತ್ತು ಗೆಲ್ಲುವುದು ಮಾತ್ರ ಮುಖ್ಯ ಆಗಿರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ.