ಹಾಸನ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಯುವ ರಾಜಕೀಯ ಮುಖಂಡನೋರ್ವನ ಭಯಾನಕ ಸೆಕ್ಸ್ ಹಗರಣ ಬಯಲಾಗುತ್ತಿದ್ದಂತೆ ಹೊಸ ವಿಷಯಗಳು ಅನಾವರಣಗೊಳ್ಳುತ್ತಿದ್ದು, ಆತನ ಮೊಬೈಲ್ ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ಮಾಹಿತಿಗಳು ಈಗ ಕನ್ನಡ ಪ್ಲಾನೆಟ್ ಗೆ ಲಭ್ಯವಾಗಿದೆ.
ರಾಜಕೀಯ ಮುಖಂಡ ತಾನು ನೂರಾರು ಮಹಿಳೆಯರೊಂದಿಗೆ ನಡೆಸಿದ ಲೈಂಗಿಕ ಚಟುವಟಿಕೆಗಳು, ದೌರ್ಜನ್ಯಗಳನ್ನು ತಾನೇ ರೆಕಾರ್ಡ್ ಮಾಡಿ ಇಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದ. ಹೀಗಿರುವಾಗ ಅವನ ಮೊಬೈಲ್ ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈ ಪ್ರಶ್ನೆಗೆ ಕನ್ನಡ ಪ್ಲಾನೆಟ್ ಉತ್ತರ ಹುಡುಕುತ್ತ ಹೋದಾಗ ಕಣ್ಣಿಗೆ ಬಿದ್ದಿದ್ದು ಬೇನಾಮಿ ಆಸ್ತಿ, ದ್ರೋಹ, ಕಿಡ್ನಾಪ್, ಹಲ್ಲೆ ಇತ್ಯಾದಿ ಘಟನೆಗಳು.
ಕಾಮುಕ ವ್ಯಾಘ್ರನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ, ಅವನಿಗೆ ನಿಷ್ಠಾವಂತನಾಗಿದ್ದ, ಸುಮಾರು ಹದಿನಾಲ್ಕು ವರ್ಷಗಳ ಕಾಲ ಆತನೊಂದಿಗೇ ಇದ್ದ ವ್ಯಕ್ತಿಯೇ ಆತನ ಮೊಬೈಲ್ ನಿಂದ ಎಲ್ಲ ಡೇಟಾವನ್ನು ವರ್ಗಾಯಿಸಿಕೊಂಡಿದ್ದ ಎಂಬ ಅಂಶ ಈಗ ಬಯಲಾಗಿದೆ. ಇದಕ್ಕೆ ದೊಡ್ಡ ಹಿನ್ನೆಲೆಯೂ ಇದೆ.
ಯುವ ರಾಜಕಾರಣಿ ಮತ್ತು ಆತನ ಜೊತೆ ಕೆಲಸ ಮಾಡುತ್ತಿದ್ದ ಯುವಕನ ನಡುವೆ ವಿಶ್ವಾಸ, ಗೆಳೆತನವಿತ್ತು. ಇಬ್ಬರೂ ಎಲ್ಲ ಕಡೆ ಒಟ್ಟೊಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಯುವ ರಾಜಕಾರಣಿಗೆ ಮಾದಕ ವಸ್ತುಗಳ ವ್ಯಸನವಿತ್ತು. ಅದನ್ನೂ ಸಹ ಈ ಯುವಕನೇ ಪೂರೈಸುತ್ತಿದ್ದ. ಎಷ್ಟೋ ಸಂದರ್ಭದಲ್ಲಿ ಮಾದಕ ವಸ್ತುಗಳ ನಶೆಯಲ್ಲಿ ಆತ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿದ್ದ. ಇಂಥದ್ದೇ ಒಂದು ಸಂದರ್ಭದಲ್ಲಿ ಯುವ ರಾಜಕಾರಣಿಯ ಐಫೋನ್ ನಲ್ಲಿದ್ದ ಎಲ್ಲ ಡೇಟಾವನ್ನು ಯುವಕ ವರ್ಗಾಯಿಸಿಕೊಂಡಿದ್ದ. ಇದಕ್ಕಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜಕಾರಣಿಯ ಐಫೋನ್ ನ ಫೇಸ್ ರೆಕಗ್ನಿಷನ್ ಟೂಲ್ ಬಳಸಿದ್ದ.
ಯುವ ರಾಜಕಾರಣಿ ಮತ್ತು ಯುವಕನ ನಡುವಿನ ಸಂಬಂಧ ಹಳಸುತ್ತ ಬಂದಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಆ ಯುವಕನ ಮದುವೆ. ಯುವ ರಾಜಕಾರಣಿಯ ತಾಯಿಯ ಕಚೇರಿಯಲ್ಲಿ ಒಬ್ಬ ಹುಡುಗಿ ಕೆಲಸ ಮಾಡುತ್ತಿದ್ದಳು. ಆಕೆಯನ್ನೇ ಯುವಕ ಮದುವೆಯಾದ. ಆದರೆ ಯುವ ರಾಜಕಾರಣಿಯ ತಾಯಿಗೆ ಇದು ಇಷ್ಟವಿರಲಿಲ್ಲ. ಮನಸ್ತಾಪಗಳು ಆಗಲೇ ಶುರುವಾಗಿದ್ದವು.
ಯುವ ರಾಜಕಾರಣಿ ಮತ್ತು ಅವರ ಕುಟುಂಬದವರು ತಮಗೆ ತುಂಬ ಆಪ್ತರಾದವರ ಹೆಸರುಗಳಲ್ಲಿ ಬೇನಾಮಿ ಆಸ್ತಿಯನ್ನು ಮಾಡುತ್ತಿದ್ದರು. ಪರಮಾಪ್ತನಾಗಿದ್ದ ಯುವಕನ ಹೆಸರಿನಲ್ಲೂ ಅರಸೀಕೆರೆಯಲ್ಲಿ ಹದಿಮೂರು ಎಕರೆ ಜಾಗ ಮಾಡಿದ್ದರು. ಆತನ ಮದುವೆಯ ನಂತರ ಆ ಜಾಗವನ್ನು ಮಾರಾಟ ಮಾಡಿ ಎಂಬ ಒತ್ತಡ ಯುವಕನಿಗೆ ಶುರುವಾಯಿತು. ಮನಸ್ತಾಪ ಇದ್ದಿದ್ದರಿಂದ ಆತನ ಹೆಸರಲ್ಲಿ ಜಮೀನು ಇರುವುದು ಬೇಡ ಎಂಬುದು ಕುಟುಂಬದವರ ನಿಲುವಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಯುವಕ ಬೇರೆಯದ್ದೇ ಯೋಚನೆ ಮಾಡಿದ್ದ. ಅವನು ತನ್ನ ಹೆಸರಿನಲ್ಲಿದ್ದ ಜಮೀನು ಮಾರಿ ಹಣ ಕೊಡಲು ಒಪ್ಪಲಿಲ್ಲ.
ಸಿಟ್ಟಿಗೆದ್ದ ಕುಟುಂಬ ತೋಳ್ಬಲ ಬಳಸಿ ಆತನನ್ನು ಬೆದರಿಸಲು ಯತ್ನಿಸಿತು. ಆತನನ್ನು ಕಿಡ್ನಾಪ್ ಮಾಡಿ ಥಳಿಸಲಾಯಿತು. ಹದಿಮೂರು ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿದ ನಂತರವೇ ಅವನನ್ನು ಬಂಧಮುಕ್ತಗೊಳಿಸಲಾಯಿತು. ಇದಾದ ಕೆಲವು ದಿನಗಳ ನಂತರ ಯುವ ರಾಜಕಾರಣಿ ಮತ್ತು ತಾಯಿಯ ವಿರುದ್ಧ ಈತ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ. ನನ್ನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆತ ಆರೋಪಿಸಿದ್ದ.
ಇದೆಲ್ಲ ಘಟನೆಗಳು ನಡೆದ ನಂತರ ಯುವಕ ಸೇಡಿಗೆ ಬಿದ್ದಿದ್ದ. ತನ್ನ ಬಳಿ ಇದ್ದ ಯುವ ರಾಜಕಾರಣಿ ತಾನೇ ರೆಕಾರ್ಡ್ ಮಾಡಿಕೊಂಡಿದ್ದ 2900ಕ್ಕೂ ಹೆಚ್ಚು ಅಶ್ಲೀಲ ದೃಶ್ಯಗಳ ವಿಡಿಯೋಗಳು, ಫೊಟೋಗಳನ್ನು ಒಂದು ಪೆನ್ ಡ್ರೈವ್ ನಲ್ಲಿ ಹಾಕಿಕೊಂಡು ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿರುವ ರಾಜಕಾರಣಿಯೊಬ್ಬರ ಬಳಿಗೆ ಹೋದ. ವಿಡಿಯೋಗಳನ್ನು ತೋರಿಸಿದ. ಆದರೆ ಆ ಪ್ರಭಾವಿ ರಾಜಕಾರಣಿ ಅಷ್ಟಾಗಿ ಆಸಕ್ತಿ ವಹಿಸಲಿಲ್ಲ. ನೋಡೋಣ ಬಿಡು ಎಂದು ಹೇಳಿ ಅವನನ್ನು ಸಾಗಹಾಕಿದರು.
ತನ್ನ ಮೇಲೆ ನಡೆದ ದೌರ್ಜನ್ಯದಿಂದ ರೋಸಿಹೋಗಿದ್ದ ಆತ ಹೊಳೆನರಸೀಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿ.ದೇವರಾಜೇಗೌಡ ಅವರನ್ನು ಸಂಪರ್ಕಿಸಿದ. ಅವರಿಗೆ ಪೆನ್ ಡ್ರೈವ್ ಕೊಟ್ಟ. ಅದನ್ನು ನೋಡಿದ ದೇವರಾಜೇಗೌಡ ನೇರವಾಗಿ ಕಳೆದ ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದರು. ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸಿ ತನ್ನ ಬಳಿ ಯುವ ರಾಜಕಾರಣಿಯೇ ರೆಕಾರ್ಡ್ ಮಾಡಿಕೊಂಡಿರುವ ಅಶ್ಲೀಲ ದೃಶ್ಯಗಳ ವಿಡಿಯೋಗಳು ಇವೆ ಎಂದು ಹೇಳಿಕೊಂಡರು. ಈ ನಡುವೆ ಯುವ ರಾಜಕಾರಣಿ ತನ್ನ ಯಾವುದೇ ಅಶ್ಲೀಲ ವಿಡಿಯೋಗಳನ್ನು ಪ್ರಕಟಿಸದಂತೆ ಒಂದು ಇಂಜೆಕ್ಷನ್ ಪಡೆದಿದ್ದರು. ಅವರು ಇಂಜೆಕ್ಷನ್ ತೆರವುಗೊಳಿಸಲಿ, ದೊಡ್ಡ ಪರದೆಯ ಮೇಲೆ ಎಲ್ಲ ವಿಡಿಯೋ ತೋರಿಸುತ್ತೇನೆ ಎಂದು ದೇವರಾಜೇಗೌಡ ಮಾಧ್ಯಮಗಳ ಮೂಲಕ ಸವಾಲು ಹಾಕಿದ್ದರು.
ಚುನಾವಣೆ ಬಂದ ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲಿನಿಂದ ಜರ್ಝರಿತರಾಗಿರುವ ಪ್ರಭಾವಿ ನಾಯಕರೊಬ್ಬರ ಬಳಿಗೆ ಪೆನ್ ಡ್ರೈವ್ ಹೋಯಿತು. ಅವರೇ ಇದನ್ನು ಹೊರಗೆ ತಂದರಾ? ಅಥವಾ ಎದುರಾಳಿಗಳು ತಂದರಾ? ಇಷ್ಟು ವ್ಯವಸ್ಥಿತವಾಗಿ ಈ ಪೆನ್ ಡ್ರೈವ್ ಗಳು ಹಾಸನ ಜಿಲ್ಲೆಯ ಮನೆಮನೆ ತಲುಪಿದ್ದು ಹೇಗೆ? ಇದೆಲ್ಲ ಮತ್ತೊಂದು ದೊಡ್ಡ ಕಥೆ. ಅದನ್ನು ಇನ್ನೊಂದು ವರದಿಯಲ್ಲಿ ಹೇಳುತ್ತೇವೆ.