ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿರುವ ಪ್ರಕರಣ ವರದಿಯಾಗಿದೆ. ಕನ್ನಡವನ್ನು ನಿಮ್ಮ ಮನೆಯಲ್ಲಿ ಇಟ್ಕೋ, ಇಲ್ಲಿ ಹಿಂದಿ ಮಾತನಾಡು ಎಂದು ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಸ್ಟೆಲ್ ವಾರ್ಡನ್ ನ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದು, ನಿನ್ನ ರಾಜ್ಯಕ್ಕೆ ನೀನು ಹೊರಡು ಎಂದು ಕನ್ನಡಾಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ನಾನಾ ಭಾಷಿಕರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುರುವ ಬೆಂಗಳೂರಿನಲ್ಲಿ ಆಗಾಗ ಕನ್ನಡದ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ನೋಡಿದ್ದೇವೆ. ಸದ್ಯ ‘ಕನ್ನಡ ನಿಮ್ಮ ಮನೆಯಲ್ಲಿ ಇಟ್ಕ, ಇಲ್ಲಿ ಹಿಂದಿ ಮಾತನಾಡು’ ಎಂದು ಎಚ್ಚರಿಕೆ ನೀಡಿದ್ದಾರೆ.
ಎಎಂಸಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡುತ್ತಿದ್ದಾಗ ವಾರ್ಡನ್ ಹಿಂದಿಯಲ್ಲಿ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ವಾರ್ಡನ್ ಬೆದರಿಕೆಗೆ ಒಪ್ಪದ ವಿದ್ಯಾರ್ಥಿಯೊಬ್ಬ, ಕನ್ನಡದಲ್ಲಿ ಏಕೆ ಮಾತನಾಡಬಾರದು? ಎಂದು ಪ್ರಶ್ನಿಸಿದ್ದಾರೆ. ಆಗ ವಾರ್ಡನ್ ಮಹಾಶಯ ಹಾಸ್ಟೆಲ್ ನಲ್ಲಿ ಯಾವ ಭಾಷೆ ಮಾತನಾಡಬೇಕು ಎಂದು ನಿರ್ಧಾರ ಮಾಡುವುದು ನಾನು. ನೀವು ನಾನು ಹೇಳಿದ ಭಾಷೆಯಲ್ಲೇ ಮಾತನಾಡಬೇಕು. ಇದು ಕಾಲೇಜು, ನಿಮ್ಮ ಮನೆಯಲ್ಲ ಎಂದು ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದು ಎಂದು ಹೇಳಲು ಈತ ಯಾರು? ಈತನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಇಷ್ಟಕ್ಕೂ ಈತನಿಗೆ ಈ ಅಧಿಕಾರ ಅಧಿಕಾರ ಕೊಟ್ಟಿದ್ದು ಯಾರು ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಎಂಸಿ ಕಾಲೇಜು ಈತನ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

