ಬೆಂಗಳೂರು : ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸ್ ವಿತೌಟ್ ಹಿಂದಿ ನಿಯಮ ಅಳವಡಿಸುವಂತೆ ಪರೀಕ್ಷಾ ಮಂಡಳಿಯನ್ನು ಅಗ್ರಹಿಸುವ ಸಲುವಾಗಿ ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ‘ದ ವತಿಯಿಂದ ಮಲ್ಲೇಶ್ವರದ ಎಸ್.ಎಸ್.ಎಲ್.ಸಿ. ಶಿಕ್ಷಣ-ಪರೀಕ್ಷಾ ಮಂಡಳಿಯ ಕಚೇರಿಗೆ ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘ, ಪ್ರಗತಿಪರ ಆಂದೋಲನಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಹೋರಾಟಗಾರರು ಮುತ್ತಿಗೆ ಹಾಕಿದರು.
ಪ್ರೌಢ ಶಿಕ್ಷಣ ಹಂತದಲ್ಲಿ ಹಿಂದಿ ಭಾಷಾ ಕಲಿಕೆಯನ್ನು 100 ಅಂಕಗಳಿಗೆ ಏರಿಸಿ ಕಡ್ಡಾಯಗೊಳಿಸಿರುವುದು ಅಪ್ರಜಾತಾಂತ್ರಿಕ ನಡೆಯಾಗಿದೆ. ಇದರಿಂದಾಗಿ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿ ಅವರ ಶೈಕ್ಷಣಿಕ ಮುನ್ನಡೆಗೆ ತೊಡಕಾಗುತ್ತಿದೆ. ಹಿಂದಿ ಕಡ್ಡಾಯ ಕಲಿಕೆಯನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಲಾಯಿತು.
ಕೆಲಹೊತ್ತು ಮಾತಿನ ಚಕಮಕಿ ನಡೆದು ಹೋರಾಟಗಾರರು ಹಿಂದೆ ಸರಿಯದೆ ಹೋದಾಗ ಕೊನೆಗೆ ಪೋಲೀಸರು ಇಲಾಖೆಯ ನಿರ್ದೇಶಕರಾದ ಮಹೇಶ್ ರವರನ್ನೇ ಕಚೇರಿಯಿಂದ ಕರೆಸಿ ಸಂಘಟನೆಗಳ ಬೇಡಿಕೆಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟರು.
ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಲೇಖಕ ಜಾಣಗೆರೆ ವೆಂಕಟರಾಮಯ್ಯನವರಃ ಮಾತನಾಡಿ ‘ ಹಿಂದಿ ಕಡ್ಡಾಯ ಕಲಿಕೆಯನ್ನು ಕನ್ನಡಿಗರು ಎಂದೂ ಒಪ್ಪುವುದಿಲ್ಲ, ಸರ್ಕಾರವು ವಿಳಂಬ ಮಾಡದೆ ಹಿಂದಿ ಹೇರಿಕೆ ರದ್ದು ಮಾಡಬೇಕೆಂದು ಅಗ್ರಹಿಸಿದರು.
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ. ರಾ. ಗೋವಿಂದು ಮಾತನಾಡಿ ‘ ಕಳೆದ ನಾಲ್ಕು ದಶಕಗಳಿಂದಲೂ ನಾನು ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿದ್ದು ಕನ್ನಡಿಗರು ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ, ಸರ್ಕಾರವು ಈ ಬಗ್ಗೆ ಖಚಿತ ನಿರ್ಧಾರ ಕ್ಯೆಗೊಳ್ಳುವಂತೆ ಆಗ್ರಹಿಸಿದರು.
ರೖತ ಸಂಘಟನೆಯ ರಾಜ್ಯಾದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ‘ ಸರ್ಕಾರದ ಹಿಂದಿ ಕಲಿಕೆ ನೀತಿಯಿಂದ ಲಕ್ಷಾಂತರ ಮಕ್ಕಳ ಬದುಕು ಭವಿಷ್ಯವು ಅತಂತ್ರಗೊಳ್ಳುತ್ತಿದೆ. ಸರ್ಕಾರವು ಸೂಕ್ತ ತೀರ್ಮಾನ ಮಾಡುವವರೆಗೂ ಹೋರಾಟ ನಿಲ್ಲದೆಂದು ‘ ಎಚ್ಚರಿಸಿದರು.
ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಮಾತನಾಡಿ ‘ ಸರ್ಕಾರವು ಹಿಂದಿ ಭಾಷಾ ಕಲಿಕೆ ರದ್ದುಮಾಡದಿದ್ದಲ್ಲಿ ಹಿಂದಿ ಭಾಷಾ ಪರೀಕ್ಷೆ ನಡೆಯುವ ಮಾರ್ಚ್ 30ರಂದು ಪರೀಕ್ಷಾ ಕೇಂದ್ರಗಳಿಗೆ ಹೋರಾಟಗಾರರು ನುಗ್ಗಿ ಅಡಚಣೆ ಉಂಟು ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಾವೇ ಕರ್ನಾಟಕದ ಪಾರ್ವತೀಶ ಬಿಳಿದಾಳೆ ಐದು ಪ್ರಮುಖ ಬೇಡಿಕೆಗಳಿರುವ ಮನವಿ ಪತ್ರವನ್ನು ಸಭೆಯಲ್ಲಿ ಓದಿದರು.
ಪ್ರತಿಕ್ರಿಯಿಸಿದ ನಿರ್ದೇಶಕರಾದ ಮಹೇಶ್ ರವರು ಈ ವಿಚಾರವನ್ನು ತಕ್ಷಣ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
2026-27 ಸಾಲಿನ ಶೈಕ್ಷಣಿಕ ವರ್ಷದಿಂದ ಎರಡು ನುಡಿ ಕಲಿಕಾ ಪದ್ಧತಿಯನ್ನು ಜಾರಿಗೊಳಿಸಬೇಕು. ಥೋರಟ್ ಆಯೋಗದ ವರದಿಯನ್ನು ಶಾಸನಸಭೆಯಲ್ಲಿ ಹಾಗೂ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು. ದ್ವಿಭಾಷಾ ನೀತಿ ಜಾರಿಯಾಗುವವರೆಗೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯಗೊಳಿಸದಂತೆ ಸರ್ಕಾರವು ಆದೇಶ ಹೊರಡಿಸಬೇಕು.
ಈ ಹಿಂದಿನ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳಲ್ಲಿ ಹಿಂದಿ ಭಾಷೆಯಲ್ಲಿ ನಪಾಸಾದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣರೆಂದು ಘೋಷಿಸಿ ಅವರ ಶೈಕ್ಷಣಿಕ ಮುನ್ನಡೆಗೆ ಅವಕಾಶ ನೀಡಬೇಕು.
ಹಿಂದಿ ಭಾಷಾ ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಬೇಕು ಮತ್ತು ಈಗಾಗಲೆ ನೇಮಕಗೊಂಡಿರುವ ಶಿಕ್ಷಕರನ್ನು ಕನ್ನಡ ಭಾಷಾ ಶಿಕ್ಷಕರಾಗಿ ನಿಯೋಜಿಸಲು ಕ್ರಮವಹಿಸಿ ಅದಕ್ಕೆ ಸೂಕ್ತ ಶೈಕ್ಷಣಿಕ ಅರ್ಹತೆ ಪಡೆಯಲು ನಿಯಮಗಳನ್ನು ರೂಪಿಸಬೇಕು.
ಕರ್ನಾಟಕ ರಾಜ್ಯದ ಯಾವುದೇ ಹಂತದ ಶಿಕ್ಷಣ ಪಠ್ಯಕ್ರಮದೊಳಗೆ ‘ ಹಿಂದಿ ಭಾಷೆಯು ರಾಷ್ಟ್ರ ಭಾಷೆ ‘ ಎಂಬ ಬಿಂಬಿಸುವ ಕಲ್ಪಿತ ವಿಷಯವನ್ನು ತೆಗೆದು ಹಾಕಬೇಕು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸ್ ವಿತೌಟ್ ಹಿಂದಿ ” ಎಂಬ ನಿಯಮವನ್ನು ಕರ್ನಾಟಕ ಸರ್ಕಾರವು ಈ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಮಾ. 30 ರಂದು ಹಿಂದಿ ಭಾಷಾ ಪರೀಕ್ಷೆ ನಡೆಯುವ ದಿನದಂದು ಎಲ್ಲ ಕನ್ನಡಪರ-ದಲಿತ-ರೈತ-ಜನಪರ ಸಂಘಟನೆಗಳು ಸೇರಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಿಂದಿ ಹೇರಿಕೆಗೆ ಅವಕಾಶ ನೀಡದೆ ಸೂಕ್ತ ತುರ್ತು ನಿರ್ಧಾರವನ್ನು ಘೋಷಿಸಬೇಕೆಂದು ಮೂಲಕ ಮನವಿ ಮಾಡಿದ್ದಾರೆ.
ಜಾಣಗೆರೆ ವೆಂಕಟರಾಮಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಸಾರಾ ಗೋವಿಂದು, ಕರವೇ ಶಿವರಾಮೇಗೌಡ, ದ್ರಾವಿಡ ಕನ್ನಡಿಗರು ಅಭಿ ಒಕ್ಕಲಿಗ, ಶೇ ಬೋ ರಾಧಾಕೃಷ್ಣ, ಪಾರ್ವತೀಶ್ ಬಿಳಿದಾಳೆ, ಕದಂಬ ಪಡೆ ಚೇತನ್, ಯುವ ಕನ್ನಡಿಗರ ವೇದಿಕೆ ರಾಮ್ ಪ್ರಸಾದ್, ವಿಜಯ್ ಕುಮಾರ್, ಶಿವಕುಮಾರ್ , ಪದ್ಮ, ಮಂಜುಳ ಇತರರು ಮುಂತಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

