ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ: ವಕೀಲರ ಪ್ರತಿಭಟನೆ

Most read

ಬೆಂಗಳೂರು:  ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಹೇಮಂತ ಚಂದನ ಗೌಡರ್, ಎನ್.ಎಸ್.ಸಂಜಯಗೌಡ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರ ದಿಢೀರ್‌ ವರ್ಗಾವಣೆ ವಿರೋಧಿಸಿ, ಬೆಂಗಳೂರು ವಕೀಲರ ಸಂಘ ಮತ್ತು  ಹೈಕೋರ್ಟ್‌ನ ಹಿರಿಯ, ಕಿರಿಯ ಮತ್ತು ಎಲ್ಲ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ ಹೈಕೋರ್ಟ್ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಇಂದು ಬೆಳಿಗ್ಗೆ‌ 10.30 ರಿಂದ 11.30 ರವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ, ಉಪಾಧ್ಯಕ್ಷ ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಸೇರಿದಂತೆ ಮಾಜಿ ಅಡ್ವೊಕೇಟ್ ಜನರಲ್ ಗಳಾದ ಬಿ.ವಿ.ಆಚಾರ್ಯ, ಉದಯ ಹೊಳ್ಳ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಸೇರಿದಂತೆ ನೂರಾರು ಹಿರಿಯ ಮತ್ತು ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ  ವಕೀಲರು ಒಂದು ಗಂಟೆ ಕಾಲ  ಹೈಕೋರ್ಟ್‌ ಕಲಾಪದಿಂದ ಹೊರಗುಳಿದಿದ್ದರು.

ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಮುಂದಿನ ಕ್ರಮಗಳನ್ನು ಕುರಿತು ಚರ್ಚಿಸಲು ಇಂದು ಮಧ್ಯಾಹ್ನ ವಕೀಲರ ಸಂಘದ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಎಂದು ವಿವೇಕ್‌ ರೆಡ್ಡಿ ತಿಳಿಸಿದ್ದಾರೆ.

More articles

Latest article