ಬೆಸ್ಕಾಂ ಅಧಿಕಾರಿಗಳು ಬೇಜವಬ್ದಾರಿ ಜನ: ಹೈಕೋರ್ಟ್ ಗರಂ:

Most read

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳು ಅತ್ಯಂತ ಬೇಜವಬ್ದಾರಿ ನೌಕರರು ಎಂದು ಹೈಕೋರ್ಟ್ ವ್ಯಾಖ್ಯಾನ ಮಾಡಿದೆ. ಬೆಸ್ಕಾಂ ಅಧಿಕಾರಿಗಳು ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯಬಲ್ಲರು ಇಂತಹವರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದೂ ನ್ಯಾಯಾಲಯ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ನಮ್ಮ ವಿರುದ್ಧ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಜಗಳೂರು ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ.ಪ್ರವೀಣ್, ವಿಭಾಗೀಯ ಅಧಿಕಾರಿ ಎಸ್.ಸಿ.ಗಂಗಾಧರ ತಿಲಕ್ ಮತ್ತು ಪಟ್ಟಣದ ಲೈನ್ಮನ್ ಅಸೀಫ್ ಸೋಮಲಾಪುರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿಯನ್ನು ವಿಚಾರಣೆಗೆ ಕೂಗುತ್ತಿದ್ದಂತೆ ನ್ಯಾಯಮೂರ್ತಿಗಳು ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ? ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಹೌದು ಎಂದು ಉತ್ತರಿಸಿ ತಮ್ಮ ವಾದವನ್ನು ಆರಂಭಿಸಲು ಮುಂದಾದರು.

ಇವರ ವಾದಕ್ಕೆ ತಡೆ ಒಡ್ಡಿದ ತಡೆದ ನ್ಯಾಯಮೂರ್ತಿಗಳು,  ಬೆಸ್ಕಾಂ ಅಧಿಕಾರಿಗಳು ದೂರು ಬಂದ ಪ್ರದೇಶಕ್ಕೆ ಕೂಡಲೇ ತೆರಳಿ ಸ್ಥಳ ಪರಿಶೀಲನೆ ಮಾಡುವುದಿಲ್ಲ. ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆದು ಬಿಡುತ್ತಾರೆ. ಇವರ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು ಎಂದು ಕೆಂಡಾಮಂಡಲರಾದರು. ಪುಣ್ಯಕ್ಕೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರಿರುವ ಈ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ. ಒಂದು ವೇಳೆ  ನನಗೆ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದರು.

ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ನ್ಯಾಯಮೂರ್ತಿಗಳು ನಿರಾಕರಿಸಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.

ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ನಿವಾಸಿ 15ರ ವಯಸ್ಸಿನ ಪಾಂಡುರಂಗ 2020ರ ಅಕ್ಟೋಬರ್ 27ರಂದು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಹೊಲಕ್ಕೆ ನುಗ್ಗುತ್ತಿದ್ದ ಹಸುವನ್ನು ತಡೆಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಆತನ ಕಾಲು ಕೈಗಳಿಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಹರಿದಿತ್ತು. ಇದರಿಂದ ಆತನ ಎರಡೂ ಕಾಲುಗಳು ಮತ್ತು ಕೈಗಳಿಗೆ ಗಾಯಗಳಾಗಿದ್ದವು. ಪಾಂಡುರಂಗನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು

More articles

Latest article