ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ರೋಸ್ ಅವಿನ್ಯೂ ಕೋರ್ಟ್ ನೀಡಿದ್ದ ಜಾಮೀನಿಗೆ ದಿಲ್ಲಿ ಹೈಕೋರ್ಟ್ ತಡೆ ನೀಡಿದೆ.
ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಈ ಸಂಬಂಧ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದ್ದು ಕೇಜ್ರಿವಾಲ್ ಜಾಮೀನಿನ ಕುರಿತು ಅಂತಿಮ ತೀರ್ಮಾನವಾಗಲಿದೆ.
ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧಿಸಿದ ನಂತರ ಅವರು ತಿಹಾರ್ ಜೈಲಿನಲ್ಲೇ ಇದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ಸಲುವಾಗಿ ಸುಪ್ರೀಂ ಕೋರ್ಟ್ ಕೆಲದಿನಗಳ ಕಾಲ ಬಂಧಮುಕ್ತಗೊಳಿಸಿತ್ತು. ನಂತರ ಕೇಜ್ರಿವಾಲ್ ಮತ್ತೆ ಶರಣಾಗಿ ತಿಹಾರ್ ಜೈಲು ಸೇರಿದ್ದರು.
ಕೇಜ್ರಿವಾಲ್ ಅವರು ರೋಸ್ ಅವಿನ್ಯೂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿ ಜಾಮೀನು ನೀಡಿದ್ದರು. ಇದರ ವಿರುದ್ಧ ಇಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಜ್ರಿವಾಲ್ ಬಿಡುಗಡೆಯನ್ನು ತಡೆಹಿಡಿದಿತ್ತು. ಈ ಕುರಿತು ಕೇಜ್ರಿವಾಲ್ ಪರ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ತಡೆಯಾಜ್ಞೆ ನೀಡದ ಹೊರತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿತ್ತು.
ನಾಳೆ ಸುಪ್ರೀಂ ಕೋರ್ಟ್ ಇದೇ ಕೇಜ್ರಿವಾಲ್ ಜಾಮೀನು ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಲಿದೆ.