ಬೆಂಗಳೂರು: ಧರ್ಮಸ್ಥಳ ಅಸಹಜ ಸಾವುಗಳ ಕುರಿತಾದ ಹೋರಾಟ ಒಂದು ಹಂತಕ್ಕೆ ಬಂದು ತಲುಪಿದೆ. ಇಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪೀಠದಲ್ಲಿ “74 ಸಾವುಗಳ ತನಿಖೆ ಕುರಿತಾದ ಪಿಐಎಲ್” ವಿಚಾರಣೆ ನಡೆಯಿತು.
ಹಿರಿಯ ವಕೀಲರಾದ ಎಸ್ ಬಾಲನ್ ಅವರು ವಾದ ಮಂಡಿಸಿದರು. ಎಸ್ ಬಾಲನ್ ವಾದ ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿಗಳು “ಎಲ್ಲಾ 74 ಪ್ರಕರಣಗಳ ತನಿಖೆ ಏನೇನಾಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಿ ಎಂದು ಸರ್ಕಾರಕ್ಕೆ ಆದೇಶ ಮಾಡಿದ್ದಾರೆ.
ಎಸ್ ಬಾಲನ್ ಅವರ ವಾದದ ಪ್ರಮುಖ ಅಂಶಗಳು : 74 ಯುಡಿಆರ್ (ಅಸಹಜ ಸಾವು ಪ್ರಕರಣ) ಕೇಸ್ ಗಳನ್ನು ಪ್ರೊಸೀಜರ್ ಫಾಲೋ ಮಾಡಿಲ್ಲ. ಹೆಣಗಳನ್ನು ಸುಟ್ಟು ಹಾಕಲಾಗಿದೆ. ಪೋಸ್ಟ್ ಮಾರ್ಟಂ ಮಾಡಿಲ್ಲ. ಶರಾವತಿ ಲಾಡ್ಜ್ ನಲ್ಲಿ ನಡೆದ ಕೊಲೆ ಕೇಸ್ ಕೂಡಾ ಯುಡಿಆರ್ ಮಾಡಿ, ಹೆಣವನ್ನು ಸುಟ್ಟು ಹಾಕಿದ್ದಾರೆ, ಪೊಲೀಸರ ಮನವಿ ಮೇರೆಗೆ ಗ್ರಾಮ ಪಂಚಾಯತ್ ಎಲ್ಲಾ ಯುಡಿಆರ್ ಶವಗಳನ್ನು ಸುಟ್ಟು ಹಾಕಿದೆ. ಆ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆ ಇದೆ. ಕೊಲೆ ಕೇಸ್ ದಾಖಲಿಸದೇ ಯುಡಿಆರ್ ದಾಖಲಿಸಿದ್ದಾರೆ. ಶವದ ವಿಡಿಯೋ, ಫೋಟೊಗ್ರಫಿ ಮಾಡಿಲ್ಲ. ಸಂಬಂಧಿಕರ ಪತ್ತೆಗೆ ಪತ್ರಿಕಾಪ್ರಕಟಣೆ ನೀಡಿಲ್ಲ. ಲಾಡ್ಜ್ ಮಾಲೀಕರನ್ನು ವಿಚಾರಣೆ ನಡೆಸಿಲ್ಲ. ಲಾಡ್ಜ್ ಮತ್ತು ನದಿ ಬದಿಯಲ್ಲಿ ಪದೇ ಪದೇ ಶವ ಪತ್ತೆಯಾದರೂ ಲಾಡ್ಜ್ ಮಾಲೀಕರು ಮತ್ತು ಶವ ಪತ್ತೆಯಾದ ಜಮೀನು ಮಾಲೀಕರಿಗೆ ಒಂದೇ ಒಂದು ನೋಟಿಸ್ ನೀಡಿ ತನಿಖೆ ಮಾಡಿಲ್ಲ
ಈ ಎಲ್ಲಾ ವಾದ ಆಲಿಸಿದ ಮುಖ್ಯನ್ಯಾಯಮೂರ್ತಿಗಳು ವಿಸ್ತೃತ ಆದೇಶ ಹೊರಡಿಸಿದರು. ಶವ ಪತ್ತೆಯಾದಾಗ ಪೋಸ್ಟ್ ಮಾರ್ಟಂ ಮಾಡಿದ್ದೀರಾ ? ನಾಪತ್ತೆಯಾದವರ ಪತ್ತೆಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ? ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶ ಮಾಡಿದ್ದಾರೆ.

