ವರದಿ: ಅಕ್ಬರ್ ಜುನೈದ್
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ದೊಡ್ಡತಪ್ಲು ಗ್ರಾಮದ ಬಳಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದರೂ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿರುವುದು ಯಾಕೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಏನಾದರೂ ಅನಾಹುತಗಳು ಸಂಭವಿಸಿದರೆ ಅದರ ಹೊಣೆಯನ್ನು ಜಿಲ್ಲಾಡಳಿತ ಹೊರಲು ಸಿದ್ಧವಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಮುಂಗಾರು ಮಳೆ ಆರಂಭವಾದಾಗಿನಿಂದ ದೊಡ್ಡತಪ್ಲು ಬಳಿ ಗುಡ್ಡ ಕುಸಿತ ಸಂಭವಿಸುತ್ತಲೇ ಇದೆ. ಕಳೆದ ಮೂರು ದಿನಗಳಿಂದ ಭೂಕುಸಿತ ನಡೆಯುತ್ತಲೇ ಇದೆ. ಜಿಲ್ಲಾಡಳಿತ ಮತ್ತು ರಸ್ತೆ ಗುತ್ತಿಗೆ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಮಿಕರು ರಸ್ತೆಯ ಮೇಲೆ ಬಿದ್ದ ಕಲ್ಲು, ಮಣ್ಣು ತೆಗೆದು ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ. ಒಂದು ವೇಳೆ ಭಾರೀ ಪ್ರಮಾಣದ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಜಿಲ್ಲಾಡಳಿತ ಮತ್ತೊಂದು ಶಿರೂರು ದುರಂತಕ್ಕೆ ತಾನೇ ತಾನಾಗಿ ಅವಕಾಶ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದ್ದು, ಅಪಾಯದ ಗೂಡಾಗಿರುವ ದೊಡ್ಡತಪ್ಲು ಬಳಿ ವಾಹನಗಳು ಸಂಚರಿಸುವಾಗ ಗುಡ್ಡ ಕುಸಿದು ದೊಡ್ಡ ಅನಾಹುತವಾದರೆ ಇಲ್ಲೂ ಒಂದಷ್ಟು ಜೀವಗಳು ಬಲಿಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ಗುಡ್ಡ ಕುಸಿದು ಹಲವರು ಮೃತಪಟ್ಟ ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಸತತ ಮೂರನೇ ದಿನವಾದ ಇಂದೂ ಸಹ ದೊಡ್ಡತಪ್ಲು ಬಳಿ ಭೂಕುಸಿತ ಸಂಭವಿಸಿದೆ. ಸ್ಥಳಕ್ಕೆ ಎಸ್ ಡಿಆರ್ ಎಫ್ ಸಿಬ್ಬಂದಿ ಕೂಡ ಆಗಮಿಸಿದ್ದಾರೆ. ರಸ್ತೆ ಸಂಚಾರ ಬಂದ್ ಆಗಿರುವುದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಭಾರೀ ವಾಹನಗಳ ಸಂಚಾರಕ್ಕೆ ಮಾತ್ರ ಈಗ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ದೊಡ್ಡ ಟ್ಯಾಂಕರ್ ಗಳು, ಬಸ್ ಗಳು, ಲಾರಿಗಳು ಸಂಚಾರ ಆರಂಭಿಸಿವೆ. ಕಾರುಗಳು ಮತ್ತು ಲಘು ವಾಹನಗಳ ಸಂಚಾರಕ್ಕೆ ಇನ್ನೂ ಅವಕಾಶ ನೀಡಲಾಗಿಲ್ಲ.
ಸ್ಥಳೀಯರ ಪ್ರಕಾರ ಮಳೆ ಪ್ರಮಾಣ ಹೆಚ್ಚಾದಷ್ಟೂ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಾಗಲಿದೆ. ಇಂಥ ಸನ್ನಿವೇಶದಲ್ಲಿ ಜಿಲ್ಲಾಡಳಿತ ಕಣ್ಣಾಮುಚ್ಚಾಲೆ ಆಟವನ್ನೇಕೆ ಆಡುತ್ತಿದೆ. ಕನಿಷ್ಠ ಮಳೆ ನಿಲ್ಲುವವರೆಗಾದರೂ ಈ ರಸ್ತೆಯಲ್ಲಿ ಸಂಚಾರವನ್ನು ಯಾಕೆ ಬಂದ್ ಮಾಡುತ್ತಿಲ್ಲ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.