ಹೆಮ್ಮಿಗೆ ಪುರ ವಾರ್ಡ್ ನಿವಾಸಿಗಳು ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಭೂಗಳ್ಳತನದ ವಿರುದ್ಧ ಒಟ್ಟಾಗಿ ಭೂ ದರೋಡೆಕೋರರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಸಂಕಲ್ಪ ಮಾಡಿದರು.
ಇಂದು ಸುಮಾರು 400 ಜನ ಸಾರ್ವಜನಿಕರು ಒಂದೆಡೆ ಸೇರಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಭೂಮಿಯ ಒತ್ತುವರಿ ವಿರುದ್ಧ ನಡಿಗೆಯಲ್ಲಿ ಭಾಗವಹಿಸಿದರು. ಜೊತೆಗೆ ನಮ್ಮ ಸುತ್ತಮುತ್ತ ಈ ರೀತಿಯ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಸ್ಥಳೀಯರಿಗೆ ಜಾಗೃತಿ ಜಾಥಾ ಮಾಡಿದರು.
ಇಂದು ನಡೆದ ಚಟುವಟಿಕೆಗಳು :
- ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ನಡಿಗೆ :
ಅಕ್ರಮ ಕಟ್ಟಡ ಕಟ್ಟುವಿಕೆ ಹಾಗೂ ಭೂ ಒತ್ತುವರಿ ವಿರುದ್ಧ ಸಾರ್ವಜನಿಕರು ಸುತ್ತಮುತ್ತಲ ಏರಿಯಾಗಳಲ್ಲಿ ಜಾಗೃತಿ ಜಾಥಾ ಮಾಡಿದರು. - ಬೋರ್ಡ್ ಉದ್ಘಾಟನೆ :
ಹಿರಿಯ ನಿವಾಸಿಗಳು “ಭೂಗಳ್ಳರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶವಿಲ್ಲ” ಎಂಬ ನಾಮಫಲಕ ಉದ್ಘಾಟನೆ ಮಾಡಿದರು. - ಲೋಗೋ ಅನಾವರಣ :
ಅಕ್ರಮ ಕಟ್ಟುವಿಕೆ ವಿರುದ್ಧ ಬೆಂಗಳೂರು ಎಂಬ ಸಂಘಟನೆಯ ಲೋಗೋ ಅನಾವರಣ ಮಾಡಲಾಯಿತು.
ಉದ್ದೇಶಗಳು :
- ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು.
- ಸಂಬಂಧಿಸಿದ ಸಂಸ್ಥೆಗಳಿಂದ ಮುಂದಿನ ಕ್ರಮ ಕೈಗೊಳ್ಳಲು ಸ್ಥಳೀಯರನ್ನು ತೊಡಗಿಸಿಕೊಳ್ಳುವುದು.
- ರಾಜಕಾರಣಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ನಾವು ಸಾರ್ವಜನಿಕರು ಈ ರೀತಿ ಅಕ್ರಮದ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ ಎಂಬ ಸಂದೇಶ ಸಾರುವುದು.
ಮುಂದಿನ ಹಂತದ ಹೋರಾಟ :
ಇಂದು ಎಲ್ಲಾ ನಿವಾಸಿಗಳೂ ತಾವು ಮುಂದಿನ ದಿನಗಳಲ್ಲಿ ಅಕ್ರಮಗಳ ವಿರುದ್ಧ ಹೋರಾಡಲು ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗವನ್ನು ಬಳಸಿಕೊಂಡು ಸಮರ್ಥವಾಗಿ ಹೋರಾಡುವುದಾಗಿ ಸಂಕಲ್ಪ ಮಾಡಿದ್ದೇವೆ. ಇನ್ನು ಯು.ಎಂ ಕಾವಲ್, ಹೆಮ್ಮಿಗೆಪುರ ಹಾಗೂ ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಬೆಂಬಲಿಸುವುದಿಲ್ಲ. ಈ ರೀತಿಯ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ಪಾರ್ಕ್, ಪಾದಚಾರಿ ಮಾರ್ಗ, ಸುಸಜ್ಜಿತ ನಗರವನ್ನು ತಲುಪಿಸುವುದು ನಮ್ಮ ಕರ್ತವ್ಯ ಅದಕ್ಕಾಗಿ ಕಟಿಬದ್ದರಾಗಿದ್ದೇವೆ.