ಬೆಂಗಳೂರು: ಮುಂಗಾರುಪೂರ್ವ ಮಳೆ ಚುರುಕಾಗಿದ್ದು, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಇಂದು ಮಧ್ಯಾಹ್ನದಿಂದಲೇ ಮೋಡ ದಟ್ಟೈಸಿಕೊಂಡು ಮಳೆ ಬೀಳುವ ನಿರೀಕ್ಷೆ ಗರಿಗೆದರಿತ್ತು. ಸಂಜೆ 5 ಗಂಟೆಯ ಹೊತ್ತಿಗೆ ತುಂತುರು ಮಳೆ ಆರಂಭಗೊಂಡು ನಂತರ ಗಾಳಿ ಸಮೇತ ಭರ್ಜರಿ ಮಳೆ ಸುರಿಯುತ್ತಿದೆ.
ಗಾಂಧಿನಗರ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಪ್ಯಾಲೆಸ್ ರಸ್ತೆ, ಆರ್.ಟಿ.ನಗರ, ಸಂಜಯನಗರ, ಶಿವಾಜಿನಗರ, ಚಿಕ್ಕಪೇಟೆ ಇತ್ಯಾದಿ ಬೆಂಗಳೂರಿನ ಮಧ್ಯಭಾಗದಲ್ಲಿ ಭಾರೀ ಮಳೆಯಾಗಿದೆ. ಅದೇ ರೀತಿ ಯಶವಂತಪುರ, ವಿಜಯನಗರ, ಹೆಸರಘಟ್ಟ, ಹೊರಮಾವು, ಬಾಣಸವಾಡಿ, ನೆಲಮಂಗಲದಲ್ಲೂ ಮಳೆಯಾದ ವರದಿಗಳು ಬಂದಿವೆ.
ಇಂದು ಸಂಜೆ ಕಪ್ಪು ಮೋಡಗಳು ಆವರಿಸಿಕೊಂಡ ಹಿನ್ನೆಲೆಯಲ್ಲಿ 5 ಗಂಟೆಯ ಸುಮಾರಿಗೇ ರಾತ್ರಿಯಾದಂತೆ ಕತ್ತಲು ಆವರಿಸಿಕೊಂಡಿತ್ತು. ನಿನ್ನೆ ಬಿಡುವು ಕೊಟ್ಟಿದ್ದ ಮಳೆ ಇಂದು ಬೆಳಿಗ್ಗೆಯೇ ಹಲವೆಡೆ ತುಂತುರಾಗಿ ಹನಿಯುವುದರೊಂದಿಗೆ ಸಂಜೆ ವೇಳೆಗೆ ಜೋರಾಗಿ ಸುರಿಯುವ ಮುನ್ಸೂಚನೆ ನೀಡಿತ್ತು.
ಕಳೆದ ಒಂದು ತಿಂಗಳಿನಿಂದ ತಡೆಯಲಾಗದ ತಾಪಮಾನದಿಂದ ಬೆಂದುಹೋಗಿದ್ದ ಬೆಂಗಳೂರಿಗರಿಗೆ ಈಗ ಬರುತ್ತಿರುವ ಮಳೆ ಕೊಂಚ ಸಾಂತ್ವನ ಮೂಡಿಸಿದೆ.