ಬೆಂಗಳೂರು: ಬರುವ ಮೂರು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದ್ದು, ನಾಳೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆ ಬೀಳುವ ಸಂಭವವಿದೆ.
ನಾಳೆ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಗುಲ್ಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಹಲವೆಡೆ ಗುಡುಗು, ಮಿಂಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದೆ.
ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದ್ದು, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆ ಬೀಳುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಅದರಲ್ಲೂ ವಿಶೇಷವಾಗಿ ಮಲೆನಾಡು ಜಿಲ್ಲೆಗಳ ಜನರು ನಾಳೆ ಮನೆಯಿಂದ ಹೊರಗೆ ಬರುವಾಗ ಕೊಡೆ, ರೇನ್ ಕೋಟ್ ತೆಗೆದುಕೊಂಡು ಹೋಗುವುದು ಒಳ್ಳೆಯದು. ಯಾಕೆಂದರೆ ಈ ವರ್ಷದ ಮೊದಲ ಮಳೆ ಬೀಳಲಿದ್ದು, ನಾಳೆ ದೊಡ್ಡ ಪ್ರಮಾಣದಲ್ಲೇ ಮಳೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ 20ರ ನಂತರ ಮತ್ತೆ ಕೆಲವು ದಿನಗಳ ಕಾಲ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ.