ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳಿಗೆ ಹರಿದ ನೀರು, ಮನೆ, ಅಪಾರ್ಟ್ ಮೆಂಟ್ ಗಳಿಗೆ ನುಗ್ಗಿದ ನೀರು, ಉರುಳಿದ ಮರ, ಕೊಂಬೆಗಳು ನಗರದ ನಿವಾಸಿಗಳನ್ನು ಕಂಗೆಡಿಸಿವೆ. ಇನ್ನು ವಾಹನ ಸಂಚಾರವಂತೂ ಕೇಳುವಂತೆಯೇ ಇಲ್ಲ. ಆಮೆ ವೇಗದಲ್ಲಿ ವಾಹನಗಲೂ ಸಾಗುತ್ತಿವೆ.
ವಾರಾಂತ್ಯದ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲವಾದರೂ ನಿನ್ನೆ ಮತ್ತು ಇಂದು ಕೆಲಸ ಕಾರ್ಯಗಲೀಗೆ ಹೋಗುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜಲಾವೃತಗೊಂಡ ರಸ್ತೆಗಳು, ಮನೆಗಳಿಗೆ ನೀರು ನುಗ್ಗಿರುವುದು ಮತ್ತು ಪ್ರಯಾಣಿಕರು ಓಡಾಡಲು ಹೆಣಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬೆಂಗಳೂರು ಸಂಚಾರ ಪೊಲೀಸರು ಹಲವಾರು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಹಲವಾರು ಅಂಡರ್ ಪಾಸ್‌ಗಳನ್ನು ಮುಚ್ಚಲಾಗಿದೆ. ರೂಪೇನ ಅಗ್ರಹಾರದಲ್ಲಿ ನೀರು ನಿಂತ ಕಾರಣ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ನ್ನು ಮುಚ್ಚಲಾಗಿದೆ.
ಬೆಂಗಳೂರಿನ ಯಾವೆಲ್ಲ ರಸ್ತೆಗಳು ಜಲಾವೃತ?
ಜಯದೇವ ಆಸ್ಪತ್ರೆ ಕಡೆಯಿಂದ ಈಸ್ಟ್ ಎಂಡ್ ಸರ್ಕಲ್ ಕಡೆಗೆ, ವರ್ತೂರು ಕಾಲೇಜು ಕಡೆಯಿಂದ ವರ್ತೂರು ಕೋಡಿ ಕಡೆಗೆ., ಕಾಟನ್‌ಪೇಟ್ ಕಡೆಯಿಂದ ಸುಲ್ತಾನ್‌ಪೇಟೆ ವೃತ್ತದ ಕಡೆಗೆ, ಬಿಳೇಕಹಳ್ಳಿ ಕಡೆಯಿಂದ ಜಿ ಡಿ ಮರ ಕಡೆಗೆ ಮತ್ತು ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಯ ರಸ್ತೆಗಳು ಜಲಾವೃತವಾಗಿವೆ.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ನಗರದಿಂದ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನ ಸವಾರರು ಬದಲಿ ರಸ್ತೆ ಬಳಸುವುದು ಒಳಿತು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಹೊಸೂರು ಮುಖ್ಯರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಬಳಕೆಗೆ ಪೊಲೀಸರು ಸಲಹೆ ನೀಡಿದ್ದಾರೆ. ಬನಶಂಕರಿ ಕಡೆಯಿಂದ ಬರುವ ವಾಹನಗಳು ಈಸ್ಟ್ ಎಂಡ್ ಸರ್ಕಲ್ ಬಳಿ ಎಡ ತಿರುವು ತೆಗೆದುಕೊಂಡು ಸಾಗರ್ ಜಂಕ್ಷನ್ ಗೆ ಬಂದು ಬಲ ತಿರುವು ತೆಗೆದುಕೊಂಡು ಬನ್ನೇರಘಟ್ಟ ರಸ್ತೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ತಡರಾತ್ರಿ ಮುಂದುವರಿದ ಮಳೆ: ತಡರಾತ್ರಿಯಿಂದಲೇ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ನಗರದಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆಯಾಗಿದೆ.
ಹೊಸೂರು ಮುಖ್ಯರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಬಳಕೆಗೆ ಪೊಲೀಸರು ಸಲಹೆ ನೀಡಿದ್ದಾರೆ. ಬನಶಂಕರಿ ಕಡೆಯಿಂದ ಬರುವ ವಾಹನಗಳನ್ನು ಈಸ್ಟ್ ಎಂಡ್ ಸರ್ಕಲ್ ಬಳಿ ಎಡ ತಿರುವು ಮಾಡಿಸಿ ಸಾಗರ್ ಜಂಕ್ಷನ್ ಗೆ ಬಂದು ಬಲ ತಿರುವು ಮಾಡಿಸಿ ಬನ್ನೇರಘಟ್ಟ ರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.
ಜಯದೇವ ಜಂಕ್ಷನ್‌ನಲ್ಲಿ ಎಡ ತಿರುವು ಮಾಡಿಸಿ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಬಿ.ಟಿ.ಎಂ ಲೇಔಟ್ ಒಳಭಾಗದಿಂದ ಬರುವ ವಾಹನಗಳನ್ನು 16ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಮಾಡಿಸಿ ತಾವರೆಕೆರೆ ಮುಖ್ಯರಸ್ತೆ ಮೂಲಕ ಡಾ. ಮರಿಗೌಡ ರಸ್ತೆ, ಡೈರಿ ಸರ್ಕಲ್ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪುಟ್ಟೇನಹಳ್ಳಿ ಮುಖ್ಯರಸ್ತೆ ಕಡೆಯಿಂದ ಕೊತ್ತನೂರು ದಿನ್ನೆ ಜಂಕ್ಷನ್ ಕಡೆಗೆ ಹಾಗೂ ಹೊಸಗುಡ್ಡದಹಳ್ಳಿ ಜಂಕ್ಷನ್ ಕಡೆಯಿಂದ ಮೈಸೂರು ರಸ್ತೆ ಟೋಲ್ ಗೇಟ್ ಕಡೆಗೆ ಮಳೆನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.