ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೂವರು ಬಲಿಯಾಗಿದ್ದಾರೆ. ಸೋಮವಾರ ಸಂಜೆ ಬಿಟಿಎಂ ಲೇಔಟ್ ನಲ್ಲಿ ಇಬ್ಬರು ಅಸು ನೀಗಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಭಾರೀ ಮಳೆಗೆ ಕಾಂಪೌಂಡ್ ಗೋಡೆ ಕುಸಿದು 35 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಬಿಟಿಎಂ ಲೇಔಟ್ ಅಪಾರ್ಟ್ ಮೆಂಟ್ ಬೇಸ್ ಮೆಂಟ್ ನಲ್ಲಿ ತುಂಬಿಕೊಂಡಿದ್ದ ನೀರನ್ನು ಮೋಟಾರ್ ಬಳಸಿ ನೀರನ್ನು ಹೊರ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಅಪಾರ್ಟ್ ಮೆಂಟ್ ನಿವಾಸಿ ಮತ್ತು 12 ವರ್ಷದ ಬಾಲಕ ಅಸು ನೀಗಿದ್ದಾರೆ. ಮೃತಪಟ್ಟವರನ್ನು ಮನಮೋಹನ್ ಕಾಮತ್ (63) ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ನೇಪಾಳಿ ಪ್ರಜೆ ಭರತ್ ಅವರ ಮಗ ದಿನೇಶ್ (12) ಎಂದು ಗುರುತಿಸಲಾಗಿದೆ.
ಸೋಮವಾರ ನಡುರಾತ್ರಿಯಲ್ಲಿ ನಗರದಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ತೀವ್ರ ಮಳೆಯಿಂದಾಗಿ ರಸ್ತೆಗಳು ಅಪಾರ್ಟ್ ಮೆಂಟ್ ಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಹೆಣ್ಣೂರಿನಲ್ಲಿ ಅನಾಥಾಶ್ರಮಕ್ಕೆ ನುಗ್ಗಿದ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೆ ಮತ್ತೊಂದು ಕಡೆ ಮಳೆಯಲ್ಲಿ ಬಸ್ ಕೆಟ್ಟು ನಿಂತಿದೆ. ಈಜಿಪುರದಲ್ಲಿ ಮದುವೆ ಮನೆಗೆ ನೀರು ನುಗ್ಗಿದೆ. ವಿಲ್ಸನ್ ಗಾರ್ಡನ್ ಲೇಕ್ ಗಾರ್ಡನ್ ಆಗಿ ಮಾರ್ಪಟ್ಟಿದೆ. ಒಟ್ಟಾರೆ ಎರಡು ದಿನಗಳ ಮಳೆಗೆ ಬೆಂಗಳೂರು ಅಲ್ಲೋಲ ಕಲ್ಲೋಲವಾಗಿದೆ.