ಹೃದಯ ಹಸನಾಗಿಸುವ ʼತಿಪ್ಪಜ್ಜಿ ಸರ್ಕಲ್’

Most read

ಕಮರ್ಶಿಯಲ್ ಜಗತ್ತಿನ ಸಾಗರದಲಿ ನಂಬಿಕೆ, ವಿಶ್ವಾಸಕ್ಕೂ ಬೆಲೆ, ನೆಲೆ ಇಲ್ಲದ ನದಿಯಲಿ ತಿಪ್ಪಜ್ಜಿ ಸರ್ಕಲ್ ಸಿನೆಮಾ ಭಾವನಾತ್ಮಕ ಪ್ರಪಂಚವನು ಸೃಷ್ಟಿಸಿದೆ. ಬದಲಾದ ಜನರೇಶನ್‌ನಲ್ಲಿ ಅದೆಷ್ಟೋ ಸರ್ಕಲ್ ಗಳಿಗೆ ನಾಮಫಲಕಗಳು ಬದಲಾಗಿವೆ. ಉದಾ : 80ವರ್ಷಕ್ಕೂ ಮೀರಿದ ಹೊಸಪೇಟೆ ಯ ‘ಶಾನ್‌ ಭಾಗ್‌ ಸರ್ಕಲ್ ಈಗ ಪುನೀತ್ ರಾಜ್ ಕುಮಾರ್ ಸರ್ಕಲ್ ಎಂದು ಹೊಸದಾಗಿ ನಾಮಕರಣ ಗೊಂಡಿದೆ… ಹಾಗೇನೇ ತಿಪ್ಪಜ್ಜಿ ಸರ್ಕಲ್. ಚಿತ್ರದುರ್ಗದಲ್ಲಿ ಒಂದಾಣೆ, ಎರಡಾಣೆ ಯುಗದಲ್ಲಿ ತಿಪ್ಪಜ್ಜಿ ಸರ್ಕಲ್ ಇದ್ದದ್ದು ಈಗ ಬಸವೇಶ್ವರ ವೃತ್ತ ಎಂದು ಹೊಸದಾಗಿ ನಿರ್ಮಾಣ ಗೊಂಡಿದೆ. ನಿರ್ದೇಶಕ ಬಿ. ಎಲ್. ವೇಣು ತಾವು ನಡೆದು ಬಂದ ಹಾದಿಯ ಹಿಂದಿನ ನೆನಪನ್ನು ಮರೆಯದೆ ಒಬ್ಬ ಮಹಿಳೆಯ ವಾಸ್ತವ ಚಿತ್ರಣವನ್ನು ಮೆಲುಕು ಹಾಕಿದ್ದಾರೆ…

ತನ್ನ  ಧರ್ಮ, ಕರ್ಮ, ಸಂಪ್ರದಾಯ ಮರೆಯದೆ ತ್ಯಾಗದ ಮನೋಧರ್ಮದವಳಾಗಿ ಒಬ್ಬ ಗಂಡಿಗೆ ಸೀಮಿತಳಾಗಿ ಚಿರ ಮುತ್ತೈದೆ ಯಾಗಿ ಬದುಕಿದ ಚಿತ್ರದುರ್ಗದ ತಿಪ್ಪಿ ಸ್ಫೂರದ್ರೂಪಿಯಾಗಿ ಕಾಣಿಸುತ್ತಾಳೆ. ಕಾಮುಕರಿಗೆ ತಿಳುವಳಿಕೆ ಹೇಳಿ ಸ್ನೇಹ ಸಂಪಾದಿಸುತ್ತಾಳೆ…. ತುಂಡು ಬಟ್ಟೆಯ ಮೈ ಪ್ರದರ್ಶನ ತೋರುವ ವಾಸ್ತವದ ಸಿನೆಮಾ ಕಾಲದಲ್ಲಿ ‘ತಿಪ್ಪಿ ‘ಮೈ ತುಂಬಾ ಸೆರಗು ಹಾಕಿಕೊಂಡು ಊರ ಗರತಿಯಾಗಿ ಗಮನ ಸೆಳೆಯುತ್ತಾಳೆ. ಈ ಚಿತ್ರದಲ್ಲಿ  ಹಾವೇರಿ, ದಾವಣಗೆರೆ, ಹರಿಹರ, ರಾಣೆಬೆನ್ನೂರ್, ಉತ್ತರ ಕರ್ನಾಟಕದ ಭಾಷಾ ಶೈಲಿ ಹಾಗೂ ಇಲಕಲ್ ಟೋಪು ಸೆರಗು ತುಂಬಾ ಆಕರ್ಷಕವಾಗಿದೆ….. ಕಾಲದ ಪರಿಧಿಯಲಿ ಮುತ್ತು ಕಟ್ಟುವ ಪದ್ಧತಿ ಹೋಗಿದ್ದರೂ ಮನೆ ಮನೆಯಲ್ಲೂ 5-6 ಮುತ್ತು ಕಟ್ಟಿರುವ ಜೋಗತಿಯರನ್ನು ಉತ್ತರ ಕರ್ನಾಟಕದ ಒಳ ಹಳ್ಳಿಗಳಲ್ಲಿ ಕಾಣುತ್ತೇವೆ. ಇದು ನನ್ನ ಸಂಶೋಧನೆ ಯ ಅವಧಿಯಲ್ಲಿ ಕಂಡಿದ್ದು. ಹವಾಮಾನ ಬದಲಾದರೂ ಮಾನವನ ರೀತಿ ಕೆಲವು ಕಡೆ ಹಾಗೇ ಉಳಿದಿದೆ!

ಈ ಚಿತ್ರದಲ್ಲಿ ಮೈ ನೆರೆದ ತಿಪ್ಪಿ ತಾನು ಮುತ್ತು ಕಟ್ಟಿಸಿಕೊಂಡು ಒಬ್ಬನಿಗೆ ಸೀಮಿತ ವಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ʼನೂಲಿನಂತೆ ಸೀರೆ ತಾಯಿಯಂತೆ ಮಗಳುʼ ಎಂಬ ಮಾತಿನಂತೆ ಆಗಬಾರದೆಂದು ಆ ಸಂಪ್ರದಾಯ ಕ್ಕೆ ಕಡಿವಾಣ ಹಾಕಲು ನಿರ್ಧರಿಸುತ್ತಾಳೆ.  ಮಗಳಿಗೆ ಮದುವೆ ಮಾಡಿ, ಮನೆ ತೊರೆದು, ಮರ್ಯಾದೆಯಿಂದ ಪಡಲಿಗೆ ಹಿಡಿದು ಉಧೋ ಉಧೋ ಹುಲಿಗೆಮ್ಮ, ಎಲ್ಲಮ್ಮ ಎಂದು ಭಿಕ್ಷೆ ಎತ್ತಿ ಮಾನವಾಗಿ ಬದುಕು ಕಟ್ಟಿ ಕೊಳ್ಳುತ್ತಾಳೆ…. ಆಪತ್ಕಾಲದ ಸಮಯದಲ್ಲಿ ಬಯಲಾಟ ಮಾಡಿಸಿ ಊರಲ್ಲಿ ಮಳೆ ಬರುವಂತೆ ದೈವದ ಮೊರೆ ಹೋಗುತ್ತಾಳೆ.. ಹೊಸಪೇಟೆ, ಗಂಗಾವತಿ, ಬಳ್ಳಾರಿ, ಸಿರುಗುಪ್ಪ ಭಾಗದಲ್ಲಿ ಜೋಗತಿಯರು ಪಡಲಿಗೆ ಹಿಡಿದು ಊರಾಡಿ ಬರುವ ಪದ್ಧತಿ ಇಂದಿಗೂ ಇದೆ.

ನಾವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಸಾವಿತ್ರಿಬಾಯಿ ಪುಲೆ, ಸರೋಜಿನಿ ನಾಯ್ದು, ಇಂದಿರಾ ಗಾಂಧಿ, ಮದರ್‌ ತೆರೇಸಾ, ಲತಾ‌ ಮಂಗೇಷ್ಕರ್ ಇಂತವರ ಹೆಸರುಗಳ ಜೊತೆಗೆ ತಿಪ್ಪಜ್ಜಿ ಯಂತ ಮಾನವೀಯ ಹೆಣ್ಣನ್ನು ನೆನೆದರೆ ತಪ್ಪಿಲ್ಲ… ಯಾಕೆಂದರೆ ಯಾವ ಮಾಶಾಸನಗಳಿಲ್ಲದ ದಿನದಲ್ಲಿ ತನ್ನದೇ ಛಾಪು ಮೂಡಿಸಿ ಬೇರೆಯವರು ಆಕೆಯನ್ನು ಊರ ಬಸವಿಯ ಹಾಗೆ ಕಾಣದೆ ತಾನು ಎಲ್ಲರೊಡಗೂಡಿ ಬದುಕುವ ಊರ ನಾಯಕಿಯಾಗಿ ಅಕೆ ಮೆರೆಯುತ್ತಾಳೆ.

ಈ ಚಿತ್ರ ನಮ್ಮ ಹೃದಯ ಹಸನಾಗಿಸುತ್ತದೆ. ಪಾತ್ರಕ್ಕೆ ಜೀವ ತುಂಬುವ ದಿಟ್ಟತನವನ್ನು ಕಲಾವಿದರು ನಿರ್ದೇಶಕರು ತಂದಿಟ್ಟು,                       ಕನ್ನಡ ಜನಪದದ ಬೇರು ಸತ್ತಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆಕರ್ಷಕ ಸಂಭಾಷಣೆ, ವಸ್ತ್ರ ವಿನ್ಯಾಸದ ಜಾಡು ಹಳ್ಳಿಯ ಸೊಗಡನ್ನು ಎತ್ತಿ ಹಿಡಿದಿದೆ. ಕೊನೆಗಾಲದಲ್ಲಿ ಕೂತು ತಿನ್ನಬಾರದೆಂದು ಸರ್ಕಾರಿ ಶಾಲೆಯ ಹತ್ತಿರ ಪೆಪ್ಪರಮಿಂಟ್‌, ಬಿಸ್ಕೆಟ್ ಅಂಗಡಿ ಇಟ್ಟು ಅದರಲ್ಲಿಯೇ ತಿಪ್ಪಜ್ಜಿ ಕೊನೆ ಉಸಿರೆಳೆಯುವುದು ವೀಕ್ಷಕರನ್ನು ಒಂದಷ್ಟು ಹೊತ್ತು ಭಾವ ಲೋಕದಲ್ಲಿ ಬಂಧಿಯಾಗಿಸುತ್ತದೆ.

ಕಥಾನಾಯಕಿ ಪೂಜಾ ಗಾಂಧಿ ತಮ್ಮ ಪಾತ್ರವನ್ನು ತುಂಬಾ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಅಲ್ಲಲ್ಲಿ ಅಶ್ಲೀಲತೆಯ ಹಾಡು ಮೂಡಿ ಬಂದರೂ ಅದನ್ನು ಬದಿಗಿರಿಸಿ ಇಡೀ ಚಿತ್ರಣ ಭವ್ಯತೆ ಮೆರೆದಿದೆ. ಊರಿನ ದಾಸಯ್ಯ ಸತ್ಯಜಿತ್  ಮತ್ತು ಸಲೀಮಣ್ಣ ನ ಪಾತ್ರಧಾರಿ ಶ್ರೀನಿವಾಸ್ ಮೂರ್ತಿ ಯವರ ಕೊನೆ ತನಕದ ಸ್ನೇಹ ಗುರುತಿಸುವಂತಹುದು.

ತಿಪ್ಪಿಯನ್ನು ಕಾಮದ ದೃಷ್ಟಿಯಲ್ಲಿ ಕಂಡ ಈ ಇಬ್ಬರು ಬಳಿಕ ಆಕೆಯನ್ನು ಓರ್ವ ಸ್ನೇಹಿತೆಯಾಗಿ ಕಂಡು ಅವಳು ಮಣ್ಣಾಗುವ ತನಕ ಕೈ ಹಿಡಿಯುವ ದೃಶ್ಯ ಕಣ್ಣಲ್ಲಿ ನೀರು ಬರಿಸುತ್ತದೆ…. ʼಎರಡಾಣೆʼ ಯ ಕಾಲದ ಸ್ನೇಹ ಬಂಧಕ್ಕೂ ಇವತ್ತಿನದಕ್ಕೂ ಬಹಳ ವ್ಯತ್ಯಾಸವಿರುವುದನ್ನು ಈ ಸಿನಿಮಾ ಸೂಚಿಸುತ್ತದೆ. ಸಾಹುಕಾರ ನ ಹೆಂಡತಿಯಾಗಿ ಭವ್ಯ ದಾವಣಗೆರೆ ತನ್ನ ಗಂಡನನ್ನು ತಿದ್ದುವ ಪ್ರಯತ್ನ ನಿಜ ಜೀವನದ ಭಾಗದಂತೆ ಭಾಸವಾಗುತ್ತದೆ.

ಡಾ. ಕೃಷ್ಣವೇಣಿ. ಆರ್. ಗೌಡ, ಹೊಸಪೇಟೆ

ಉಪನ್ಯಾಸಕರು

More articles

Latest article