ಬೆಂಗಳೂರು: ತನ್ನ ಮೇಲೆ ಅನೇಕ ಮಹಿಳೆಯರು ದಾಖಲಿಸಿರುವ ಲೈಂಗಿಕ ದೌರ್ಜನ್ಯದ ದೂರಿನ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ಮುಂದೆ ಹಾಜರಾಗಲು ಒಂದು ವಾರದ ಕಾಲಾವಕಾಶ ನೀಡುವಂತೆ ಹಾಸನ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೋರಿದ್ದಾನೆ.
ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ಕಾಲಾವಕಾಶ ಕೋರಿ ನಾನು ನನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಪ್ರಜ್ವಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾನೆ.
ನಿನ್ನೆಯಷ್ಟೇ SIT ತಂಡ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಎಚ್.ಡಿ.ರೇವಣ್ಣ ಇಬ್ಬರಿಗೂ ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ SIT ಡಿವೈಎಸ್ ಪಿಗೆ ಪತ್ರ ಬರೆದಿರುವ ಪ್ರಜ್ವಲ್ ಪರ ವಕೀಲ ಅರುಣ್ ಜಿ. ತನ್ನ ಕಕ್ಷಿದಾರ ಬೆಂಗಳೂರಿನಲ್ಲಿ ಇಲ್ಲದ ಕಾರಣ, ಒಂದು ವಾರದ ಕಾಲಾವಕಾಶ ಒದಗಿಸುವಂತೆ ಕೋರಿದ್ದಾರೆ.