ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ (Hassan MP Prajwal Revanna) ಪ್ರಕರಣಕ್ಕೆ ಸಂಬಂಧಿಸಿದ ಕೆಆರ್ ನಗರ ಸಂತ್ರಸ್ತೆಯ ಅಪಹರಣದಲ್ಲಿ ಸಿಲುಕಿರುವ ಶಾಸಕ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಂದು ಬೆಳಿಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ SIT ಪರ ವಾದ ಮಂಡಿಸಿದ ಜಯ್ನಾ ಕೊಠಾರಿ, ರೇವಣ್ಣ ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರೇವಣ್ಣ ಅವರೇ ಅಪಹರಣಕ್ಕೆ ಯೋಜನೆ ರೂಪಿಸಿದ್ದಾರೆ. ಇತರೆ ಆರೋಪಿಗಳು ಈಗಾಗಲೇ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಶಿಕ್ಷೆಯ ಪ್ರಮಾಣ ಜೀವಾವಧಿ ಶಿಕ್ಷೆ ಇದ್ದಾಗ ಜಾಮೀನು ನಿರಾಕರಿಸಬಹುದು ಎಂದು ಕಿಡ್ನ್ಯಾಪ್ ಕೇಸ್ ಗಂಭೀರತೆ ಬಗ್ಗೆ ಕೋರ್ಟ್ ಗಮನಕ್ಕೆ ತಂದ ಅವರು ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದರು
ಇನ್ನೂ ಕೆಲ ಸಾಕ್ಷಿಗಳ ಹೇಳಿಕೆ ದಾಖಲಿಸಬೇಕಿದೆ. ಸಂತ್ರಸ್ತೆ ಕಿಡ್ನ್ಯಾಪ್ ಮಾತ್ರ ಆಗಿರಲಿಲ್ಲ, ಅತ್ಯಾಚಾರದ ಸಂತ್ರಸ್ತೆ. ಆರೋಪಿಗೆ ಜಾಮೀನು ಕೊಟ್ಟರೆ, ಸಂತ್ರಸ್ತೆಯ ಹಕ್ಕಿನ ರಕ್ಷಣೆ ಹೇಗೆ ಸಾಧ್ಯ? ಬೇರೆ ಸಂತ್ರಸ್ತರಿಗೂ ಇದು ಬೆದರಿಕೆಯಾಗುವ ಸಾಧ್ಯತೆ ಇದೆ.
ಆರೋಪಿ ಹೊರ ಬಂದರೆ ಬೇರೆಯವರು ಮುಂದೆ ಬರಲ್ಲ. ಈ ಆರೋಪಿ ಇನ್ನೊಂದು ಕೇಸ್‌ನಲ್ಲೂ ಆರೋಪಿಯಾಗಿದ್ದಾರೆ. ಆರೋಪಿ ವಿರುದ್ದ ದೂರು ನೀಡಬಾರದು ಎಂದೇ ಅಪಹರಣ ಮಾಡಲಾಗಿದೆ. ಕೆಲ ಸಂತ್ರಸ್ಥರ ದೂರುಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 164ರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕಾಗಿದೆ. ಅದಕ್ಕೂ ಮುನ್ನ ಜಾಮೀನು ನೀಡುವುದು ಸರಿಯಲ್ಲ ಎಂದು ಅವರು ವಾದಿಸಿದರು.
ಮತ್ತೋರ್ವ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ ವಾದ ಮಂಡಿಸಿ, ಸಂತ್ರಸ್ತೆಯನ್ನು ರೇವಣ್ಣರ ಹಿಂದಿನ ಆಪ್ತ ಸಹಾಯಕನ ತೋಟದಲ್ಲಿಟ್ಟಿದ್ದರು. ಪ್ರಕರಣದಲ್ಲಿ 120B ಷಡ್ಯಂತ್ರ ಕೂಡ ಸೇರಿಸಲಾಗಿದೆ. ರೇವಣ್ಣ ಪುತ್ರ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ದೇಶ ಬಿಟ್ಟು ಓಡಿಹೋಗಿದ್ದಾನೆ. ಇಲ್ಲಿ ಒಳಸಂಚು ಮಾಡಲಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ಅಜ್ಜಿ ಇದ್ದಾರೆ, ಮೊಮ್ಮಕ್ಕಳಿದ್ದಾರೆ. ದೂರುದಾರನೇ ಈ ಬಗ್ಗೆ ಉಲ್ಲೇಖವನ್ನು ಮಾಡಿದ್ದಾನೆ ಎಂದು ಅವರು ವಾದ ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅನರ್ಹತೆ ಪ್ರಕರಣದ ಬಗ್ಗೆ ಉಲ್ಲೇಖಿಸಿದ ಅವರು ಈ ಕೇಸ್ ನಲ್ಲಿ ಮೊದಲೊಮ್ಮೆ ಸಂತ್ರಸ್ತೆಯನ್ನ ಕರೆದೊಯ್ಯಲಾಗಿದೆ. ಶರತ್ ಗೌಡರ ಮನೆಯಲ್ಲಿ ಸಂತ್ರಸ್ತೆಯನ್ನ ಇಡಲಾಗಿತ್ತು. ಸಂತ್ರಸ್ತೆಯನ್ನ ಅನೇಕ ಕಡೆಗಳಲ್ಲಿ ಕರೆದೊಯ್ಯಲಾಗಿದೆ.
ಕೇಸ್ ಡೈರಿಯನ್ನ ಒಮ್ಮೆ ನೋಡಿ ಸ್ವಾಮಿ, ಆಕೆಗೆ ತುಂಬಾ ಭಯವಿದೆ. ಆಕೆಗೆ ಭದ್ರತೆ ತುಂಬಾ ಮುಖ್ಯವಾಗಿದೆ. ಭದ್ರತೆಯಲ್ಲಿಡಲಾಗಿದೆ. ಸಂತ್ರಸ್ತೆಗೆ ಜೀವ ಭಯವಿದೆ. ಇವರ ಪ್ರಭಾವ ಎಷ್ಟಿದೆ ಎಂದರೆ ತುಂಬಾ ಜನ ದೂರು ಕೊಟ್ಟಿದ್ದಾರೆ. ಆದ್ರೆ ಎಲ್ಲಾ ದೂರುಗಳಲ್ಲೂ ಬಿ ರಿಪೋರ್ಟ್ ಆಗಿದೆ. ಸಂತ್ರಸ್ತೆಗೆ ರಕ್ಷಣೆ ಬೇಕು, ಹೀಗಾಗಿ ಜಾಮೀನು ನೀಡಬಾರದು ಎಂದು ಅವರು ವಾದಿಸಿದರು.
ಆರೋಪಿ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, SIT ಅಧಿಕಾರಿಗಳು ಕಪೋಲಕಲ್ಪಿತ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆ ಮೇಲೆ ಯಾವುದೇ ಮಾರಣಾಂತಿಕ ಹಲ್ಲೆಯಾಗಿಲ್ಲ. ಪ್ರಕರಣದಲ್ಲಿ ಸಾಕ್ಷಿ ಕಲೆ ಹಾಕುವುದೇ ತಡವಾಗಿದೆ. ಪ್ರಾಥಮಿಕವಾಗಿ ಏನ್ ಮಾಡಬೇಕೋ ಅದನ್ನು ಸರಿಯಾಗಿ ಮಾಡಿಲ್ಲ. 364A ಅಡಿ FIR ದಾಖಲಾಗಿರುವುದೇ ಕಾನೂನುಬಾಹಿರ ಎಂದು ವಾದ ಮಂಡಿಸಿದರು.
ನಾಲ್ಕು ದಿನವಾದರೂ ದೂರು ಯಾಕೆ ಕೊಡಲಿಲ್ಲ? ಸಂತ್ರಸ್ತೆ ಕರೆದೊಯ್ದವರು ರೇವಣ್ಣ ಪತ್ನಿ ಸಂಬಂಧಿ. ಸಂತ್ರಸ್ತೆ ರೇವಣ್ಣ ಮನೆಯಲ್ಲಿ ಕೆಲಸ ಮಾಡ್ತಿದ್ರು. ಕಿಡ್ನಾಪ್ ಮಾಡುವ ಉದ್ದೇಶ ಎಲ್ಲಿ ಬರುತ್ತೆ? ಕಿಡ್ನಾಪ್ ಎಂದು ದೂರುದಾರನಿಗೆ ಹೇಗೆ ಗೊತ್ತಾಯ್ತು. ಅದು ಮಹಿಳೆಯ ಪುತ್ರನ ಊಹೆ ಅಷ್ಟೇ.
ರೇವಣ್ಣ ಬಂಧನವಾದ ದಿನವೇ ಸಂತ್ರಸ್ತೆ ಪತ್ತೆಯಾಗಿದ್ದಾಳೆ. ಸಂತ್ರಸ್ತೆ ಪ್ರಜ್ವಲ್ ಮೇಲೆ ಮಾತ್ರ ಆರೋಪ ಮಾಡಿದ್ದಾಳೆ. ರೇವಣ್ಣ ಮೇಲೆ ಯಾವುದೇ ಆರೋಪ ಮಾಡಿಲ್ಲ.
ಮೇ 4ರಂದು ಸಂತ್ರಸ್ತೆಯನ್ನು ರಕ್ಷಣೆ ಮಾಡ್ತಾರೆ. ಮೇ 4, 5 ರಂದು ಮಹಿಳೆ ಹೇಳಿಕೆ ದಾಖಲು ಮಾಡಿಲ್ಲ. ಕೊನೆಗೆ ಸಂತ್ರಸ್ತೆಗೆ ಕೌನ್ಸಿಲಿಂಗ್ ಮಾಡಿದ್ದಾರೆ. ಇದೆಲ್ಲಾ ಸರ್ಕಸ್ ಯಾಕೆ ಮಾಡ್ತಾರೆ. CRPC164 ದಾಖಲು ಮಾಡಲು ಆಪ್ತರು ಬೇಕಾ? ಎಂದು ವಾದಿಸಿದ ಸಿ.ವಿ.ನಾಗೇಶ್ ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ವಿನಂತಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ.