ಬೆಂಗಳೂರು: ಕೇಸರಿ ಶಾಲು ಹಾಕುವುದು ಅಪರಾಧನಾ? ಕೇಸರಿ ಶಾಲಿನಲ್ಲಿ ಸಿದ್ಧಾಂತ ಇರುವುದಿಲ್ಲ. ನಮ್ಮ ಮನಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ಧಾಂತ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದನೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಟೀಕೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಜೊತೆ ಸಹವಾಸ ಮಾಡಿದ್ದೇ ತಪ್ಪು ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ, ಕಾಂಗ್ರೆಸ್ ನವರು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಬಿಜೆಪಿ ಜೊತೆ ಹೋಗಿದ್ದೇವೆ ಎಂದರು.
ದೇವೇಗೌಡರು ಈ ಹಿಂದೆ ಆಡಿರುವ ಮಾತುಗಳನ್ನು ಪದೇಪದೆ ಹೇಳ್ತೀರಾ? ನೀವು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ಏನು ಮಾತಾಡಿದ್ದೀರಾ? ಈಗ ನಡುಬಗ್ಗಿಸಿ ನಿಲ್ತೀರಾ ಎಂದೆಲ್ಲ ಹರಿಹಾಯ್ದ ಅವರು, ಡಿ.ಕೆ.ಶಿವಕುಮಾರ್ ಟೂರಿಂಗ್ ಟಾಕೀಸ್ ಇಟ್ಟುಕೊಂಡೇ ಬಂದಿದ್ದು. ಈಗ ಟೂರಿಂಗ್ ಟಾಕೀಸ್ ಮಹತ್ವವನ್ನು ಮರೆತಿದ್ದಾರೆ. ಬಲಿಷ್ಠವಾಗಿ ಬೆಳೆದಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ನವರು ಜಾತ್ಯತೀತ ಅರ್ಥ ಏನು ಅಂತಾ ಮೊದಲು ಹೇಳಲಿ. ಕಾಂತರಾಜು ವರದಿ ಯಾವ ಆಧಾರದ ಮೇಲಿದೆ, ಜಾತ್ಯತೀತವಾಗಿ ಇದೆಯಾ ಎಂದು ತಿಳಿಸಲಿ. ಜಾತಿ ಜಾತಿಗಳನ್ನು ಎತ್ತಿಕಟ್ಟಲು ವರದಿ ಮಾಡ್ತಿದ್ದೀರ ಎಂದು ಅವರು ಟೀಕಿಸಿದರು.