ಬನ್ಸ್ವಾರಾ (ರಾಜಸ್ತಾನ): ಅತ್ಯಂತ ನಾಚಿಕೆಗೇಡಿನ ವಿದ್ಯಮಾನವೊಂದರಲ್ಲಿ ದೇಶದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರೇ ಧಾರ್ಮಿಕ ದ್ವೇಷದ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ.
ರಾಜಸ್ತಾನದ ಬಸ್ಸ್ವಾರಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಸಾಂವಿಧಾನಿಕ ಮೌಲ್ಯಗಳ ಎಲ್ಲ ಎಲ್ಲೆಗಳನ್ನು ಮೀರಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರಿದರು. ಧರ್ಮದ ಹೆಸರಿನಲ್ಲಿ ಮತ ಯಾಚಿಸುವಂತಿಲ್ಲ ಎಂಬ ಚುನಾವಣಾ ಆಯೋಗದ ನೀತಿಸಂಹಿತೆಗಳು ಗಾಳಿಗೆ ತೂರಿ ಹೋದವು.
ದ್ವೇಷ ಭಾಷಣವಷ್ಟೇ ಅಲ್ಲ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಹಸಿಹಸಿ ಸುಳ್ಳನ್ನೂ ಹೇಳಿದರು. ʻʻ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಮಾತ್ರ ಎಂದು ಹೇಳಿತ್ತು. ಇದರ ಅರ್ಥ ಹೆಚ್ಚು ಮಕ್ಕಳನ್ನು ಯಾರು ಹೊಂದಿರುತ್ತಾರೋ ಅವರಿಗೆ ಈ ದೇಶದ ಸಂಪತ್ತನ್ನು ಹಂಚುವುದು ಅವರ ಉದ್ದೇಶ. ನೀವು ಕಷ್ಟಪಟ್ಟು ದುಡಿದ ಹಣವನ್ನು ಈ ನುಸುಳುಕೋರರಿಗೆ (ಮುಸ್ಲಿಮರಿಗೆ) ಹಂಚಬೇಕೆ? ಇದಕ್ಕೆ ನಿಮ್ಮ ಸಮ್ಮತಿ ಇದೆಯೇ? ಇದನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಲಾಗಿದೆ. ದೇಶದ ವೈಯಕ್ತಿಕ ಆಸ್ತಿಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಹಂಚಲಿದೆ. ಇದು ನಗರ ನಕ್ಸಲರ ( Urban Naxal) ಯೋಜನೆಯಾಗಿದೆ. ಇದರಿಂದ ನಿಮ್ಮ ಹೆಣ್ಣುಮಕ್ಕಳ ಮಾಂಗಲ್ಯ ಕೂಡ ಉಳಿಯುವುದಿಲ್ಲʼʼ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದ ಸಂವಿಧಾನವನ್ನು, ಅದರ ಮೌಲ್ಯಗಳನ್ನು, ಚುನವಣಾ ಪ್ರಜಾಸತ್ತೆಯನ್ನು ರಕ್ಷಿಸುವ ಜವಾಬ್ದಾರಿ ಹೊತ್ತ ಪ್ರಧಾನಿಯವರೇ ಹೀಗೆ ಧಾರ್ಮಿಕ ನೆಲೆಯಲ್ಲಿ ದ್ವೇಷ ಭಾಷಣ ಮಾಡಿರುವುದು, ಅದರ ಜೊತೆಯಲ್ಲಿ ಕಪೋಲಕಲ್ಪಿತ ಸುಳ್ಳುಗಳನ್ನು ಹೇಳಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಚುನಾವಣೆಯಲ್ಲಿ ಮೋದಿ ಸೋಲುವ ಭೀತಿಯಿಂದ ಹತಾಶೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೇ ಈ ರೀತಿಯಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಆಯೋಗಕ್ಕೆ ಮೋದಿಯೇ ಗೆಲ್ಲಬೇಕು ಎಂದಿದ್ದರೆ ಚುನಾವಣೆಗಳನ್ನು ಈ ಕೂಡಲೇ ಸ್ಥಗಿತಗೊಳಿಸಿ ಮೋದಿಯವರನ್ನೇ ಗೆದ್ದಿದ್ದಾರೆ ಎಂದು ಘೋಷಿಸಿಬಿಡಲಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿದಂತೆ ದೇಶದ ಎಲ್ಲ ಜನರ ಆಸ್ತಿ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವ ಯಾವುದೇ ಅಂಶವೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲ. ಅಷ್ಟೇ ಅಲ್ಲ, ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಮರಿಗೆ ಇದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿರುವುದಕ್ಕೂ ಯಾವುದೇ ಆಧಾರವಿಲ್ಲ. ಆದರೂ ಪ್ರಧಾನಿ ಮೋದಿ ಈ ರೀತಿ ವಿಷ ಕಾರುವ ಭಾಷಣ ಮಾಡಿದ್ದರ ಹಿನ್ನೆಲೆಯಲ್ಲಿ ಸೋಲಿನ ಭೀತಿ ಮತ್ತು ಹತಾಶೆ ಇದೆ ಎಂದು ಹಲವರು ಟೀಕಿಸಿದ್ದಾರೆ.