ಹಾಸನ: ಹಾಸನದ ಕೃಷಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿಯಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಮತ್ತು ರೈತರು ಸೇರಿಕೊಂಡು ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಶಾಸಕ ಎಚ್.ಡಿ ರೇವಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಹಾಸನದಲ್ಲಿ ಕೃಷಿ ಕಾಲೇಜು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಉತ್ತಮವಾಗಿ ನಡೆಯುತ್ತಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸರ್ಕಾರ ದುರುದ್ದೇಶದಿಂದ ಇದನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೃಷಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಉಳಿಯಬೇಕು ಎಂದು ಸದನದಲ್ಲಿ ಶಾಸಕರು, ಮುಖ್ಯಮಂತ್ರಿ ಗಮನ ಸೆಳೆದಿದ್ದೇವೆ. ಆಗ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ರಾತೋರಾತ್ರಿ ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸಿ ಬಿಲ್ ಪಾಸ್ ಮಾಡಿದ್ದಾರೆ ಎಂದು ಆಪಾದಿಸಿದರು. ಈ ಸಂಬಂಧ ರಾಜ್ಯಪಾಲರಿಗೆ ಸಹಿ ಹಾಕಲು ಕಳುಹಿಸಿದ್ದಾರೆ. ಈ ಪ್ರಸ್ತಾವಕ್ಕೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಈಗಾಗಲೇ ಮನವಿ ನೀಡಲಾಗಿದೆ. ರಾಜ್ಯಪಾಲರಿಗೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದು ರೇವಣ್ಣ ತಿಳಿಸಿದರು.
ಹಾಸನ ಕೃಷಿ ಕಾಲೇಜಿನ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಕೋರ್ಸ್ ಗಳನ್ನು ತರಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಅವರಿಗೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ಕೃಷಿ ಕಾಲೇಜಿನ ಅಭಿವೃದ್ಧಿಗೆ ನಾವು ಪ್ರಯತ್ನಿಸುತ್ತಿರುವ ನಡುವೆ ರಾಜ್ಯ ಸರ್ಕಾರದ ಈ ರೀತಿಯ ಕ್ರಮಗಳು ಸರಿಯಲ್ಲ ಎಂದು ಹೇಳಿದರು.
20 ವರ್ಷಗಳಿಂದ ಕೃಷಿ ಕಾಲೇಜು, ಬೆಂಗಳೂರಿನ ಜಿಕೆವಿಕೆಯಲ್ಲಿಯೇ ಇದೆ. ಇದನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸಲು ನಾವು ಬಿಡುವುದಿಲ್ಲ. ಬಿಜೆಪಿ ಶಾಸಕರು ನಾವು ಸೇರಿ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ರೇವಣ್ಣ ಪುನರುಚ್ಚರಿಸಿದರು.