ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗವನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಅದು ಹಿಂದೆಂದೂ ಕಂಡಿರದ ವಿಶ‍್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿದೆ. – ಶ್ರೀನಿವಾಸ ಕಾರ್ಕಳ
ಭಾರತದಲ್ಲಿ ‘ಚುನಾವಣಾ ಆಯೋಗ’ ಎಂಬುದೊಂದಿದೆ ಮತ್ತು ಅದಕ್ಕೆ ಅಗಾಧವಾದ ಅಧಿಕಾರವಿದೆ ಎಂದು ಮೊದಲ ಬಾರಿ ದೇಶದ ಜನತೆಗೆ ತಿಳಿದುದು ಟಿ ಎನ್ ಶೇಷನ್ ಕಾಲದಲ್ಲಿ. ಶೇಷನ್ 1990 ರಿಂದ 1996 ರ ವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಚುನಾವಣಾ ಗುರುತು ಚೀಟಿ ಸಹಿತ ಅನೇಕ ಚುನಾವಣಾ ಪ್ರಕ್ರಿಯೆಗಳಲ್ಲಿ ಅಪಾರ ಸುಧಾರಣೆಗಳನ್ನು ತಂದರು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದರು. ಹೀಗಾಗಿ ಚುನಾವಣಾ ಆಯೋಗದ ಹೆಸರು ಉಲ್ಲೇಖವಾದಾಗಲೆಲ್ಲ ಶೇಷನ್ ಹೆಸರು ನೆನಪಾಗುತ್ತಲೇ ಇರುತ್ತದೆ.
ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗ
ಶೇಷನ್ ಒಂದು ಗಟ್ಟಿ ತಳಹದಿ ಹಾಕಿಕೊಟ್ಟ ಕಾರಣ, ಆನಂತರ ಬಂದ ಹೆಚ್ಚಿನ ಚುನಾವಣಾ ಆಯುಕ್ತರುಗಳು ಬಹುಮಟ್ಟಿಗೆ ಆಯೋಗದ ಘನತೆಯನ್ನು ಕಾಪಾಡಿಕೊಂಡೇ ಬಂದರು. ಮೋದಿ ಕಾಲದ 2015 ರಿಂದ 2018 ರ ವರೆಗಿನ ಮುಖ್ಯ ಆಯುಕ್ತರಾಗಿದ್ದ ಹರಿಶಂಕರ್ ಬ್ರಹ್ಮ, ನಸೀಮ್ ಝೈದಿ, ಅಚಲ್ ಕುಮಾರ್ ಜ್ಯೋತಿ, ಓಮ್ ಪ್ರಕಾಶ್ ರಾವತ್ ಕೂಡಾ ಒಂದು ಮಟ್ಟಿನ ಸತ್ಯಸಂಧತೆಯನ್ನು ಕಾಪಾಡಿಕೊಂಡರು.
ಆದರೆ ಚುನಾವಣಾ ಆಯೋಗ ಸಂಪೂರ್ಣವಾಗಿ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಾ ಒಂದು ನಿರ್ದಿಷ್ಟ ಪಕ್ಷದ ಸಹವರ್ತಿಯೋ ಎಂಬಂತೆ ವರ್ತಿಸತೊಡಗಿದ್ದು ಸುನಿಲ್ ಅರೋರಾ ಮುಖ್ಯ ಆಯುಕ್ತರಾಗಿದ್ದ 2021 ರಿಂದ. ಸುನಿಲ್ ಅರೋರಾ ಬಳಿಕ ಮುಖ್ಯ ಆಯುಕ್ತರಾದ ಸುಶೀಲ್ ಚಂದ್ರ, ಈಗಿನ ರಾಜೀವ್ ಕುಮಾರ್ ಚುನಾವಣಾ ಆಯೋಗದ ವಿಶ‍್ವಾಸಾರ್ಹತೆಯನ್ನು ಸಂಪೂರ್ಣ ನಾಶ ಮಾಡಿದರು. ನಿಷ್ಪಕ್ಷಪಾತ ಚುನಾವಣೆ ನಡೆಸುತ್ತಾರೆ ಎಂದು ವಿಪಕ್ಷ ಗಳು ಭರವಸೆಯಿಂದ ಆಯೋಗದೆಡೆಗೆ ನೋಡುತ್ತಿದ್ದರೆ, ಆಯೋಗವು ಬಹಿರಂಗವಾಗಿಯೇ ಬಿಜೆಪಿ ಪಕ್ಷಕ್ಕೆ ಮತ್ತು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನುಕೂಲವಾಗುವ ಹಾಗೆ ಮತದಾನ ಹಂತಗಳನ್ನು, ಚುನಾವಣಾ ದಿನಾಂಕಗಳನ್ನು ಘೋಷಿಸತೊಡಗಿತು. ಪ್ರಧಾನಿಯವರು ನಿರ್ಭಿಡೆ ಯಿಂದ ಚುನಾವಣಾ ನೀತಿ ಸಂಹಿತೆಗಳನ್ನು ಉಲ್ಲಂಘಿಸಿದಾಗ ಅವರ ವಿರುದ್ಧ ಕ್ರಮ ಜರುಗಿಸುವುದು ಬಿಡಿ, ಅವರಿಗೆ ಎಚ್ಚರಿಕೆಯ ನೋಟೀಸು ಕೂಡಾ ನೀಡಲಿಲ್ಲ.
ಒಂದೆಡೆಯಲ್ಲಿ ಈ ಪರಿಸ್ಥಿತಿಯಾದರೆ, ಇನ್ನೊಂದೆಡೆ ಚುನಾವಣಾ ಆಯುಕ್ತರ ನಡುವೆಯೇ ಕದನ ಆರಂಭವಾಯಿತು. ಅರುಣ್ ಗೋಯಲ್ ಕಾಲದಲ್ಲಿ ಇನ್ನೊಬ್ಬ ಆಯುಕ್ತ ಅಶೋಕ್ ಲವಾಸಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಹೊರ ನಡೆದರು (ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗಲೂ ಅವರ ಬಗ್ಗೆ ಇನ್ನಿಬ್ಬರು ಆಯುಕ್ತರು ಮೃದು ಧೋರಣೆ ವಹಿಸಿದ್ದನ್ನು ವಿರೋಧಿಸಿ ರಾಜಿನಾಮೆ ನೀಡಿದ್ದರು). ಈಗ ಮೊನ್ನೆ ಮೊನ್ನೆಯಷ್ಟೇ ಆಯುಕ್ತ ಅರುಣ್ ಗೋಯಲ್ ರಾಜಿನಾಮೆ ನೀಡಿ ಹೊರಬಿದ್ದಿದ್ದಾರೆ. ಮುಖ್ಯ ಆಯುಕ್ತರ ನಡೆವಳಿಕೆಯ ಬಗ್ಗೆ ಅರುಣ್ ಗೋಯಲ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಚುನಾವಣಾ ಆಯೋಗ ಯಾಕೆ ಸರಕಾರದ ಕೈಗೊಂಬೆಯಾಗಿದೆ?
ಚುನಾವಣಾ ಆಯೋಗ ಯಾಕೆ ಸರಕಾರದ ಕೈಗೊಂಬೆಯಾಗಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟರೆ ಮೊದಲು ಸಿಗುವ ಉತ್ತರ ಆಯುಕ್ತರ ನೇಮಕಾತಿಯ ಪ್ರಕ್ರಿಯೆ. ಪ್ರಧಾನಿಗಳು, ಕಾನೂನು ಮಂತ್ರಿ ಮತ್ತು ವಿಪಕ್ಷ ನಾಯಕ ಹೀಗೆ ಮೂವರು ಸೇರಿ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. ನಾಯಕರು ಪ್ರಾಮಾಣಿಕರಾಗಿದ್ದಾಗ ಮತ್ತು ಸಮಿತಿಯ ಮೂವರು ಸದಸ್ಯರಲ್ಲೂ ಪರಸ್ಪರ ವಿಶ‍್ವಾಸ ಇದ್ದಾಗ ಸಮಸ್ಯೆಯೇನೂ ಆಗದು. ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದ್ದಾಗ ಏನಾಗುತ್ತದೆ? ಮೊನ್ನೆ ಮೊನ್ನೆಯ ವರೆಗೆ ಏನಾಗುತ್ತಿತ್ತೋ ಅದೇ ಆಗುತ್ತದೆ. ಅಂದರೆ ಪ್ರಧಾನಿಗಳು ಮತ್ತು ಕಾನೂನು ಮಂತ್ರಿ ಸೇರಿ ಅವರಿಗೆ ಬೇಕಾದ ‘ಜೀಹುಜೂರ್’ ಆಯುಕ್ತರನ್ನು ಮಾಡುತ್ತಾರೆ ಮತ್ತು ವಿಪಕ್ಷ ನಾಯಕ ಹೆಸರಿಗಷ್ಟೇ ಅಲ್ಲಿ ಇರುತ್ತಾರೆ. ಜಿಹುಜೂರ್ ಆಯುಕ್ತರು ಸರಕಾರದ ಭಕ್ತರಾಗಿಯೇ ಕೆಲಸ ಮಾಡುತ್ತಾರೆ.
ಈ ನ್ಯಾಯ ಸಮ್ಮತವಲ್ಲದ ಪ್ರಕ್ರಿಯೆಯ ಕಾರಣವಾಗಿ, ಅತ್ಯಂತ ಅಯೋಗ್ಯ ಮತ್ತು ಪಕ್ಷಪಾತಿ ಆಯುಕ್ತರುಗಳ ನೇಮಕವಾಗುತ್ತಿರುವ ಹಿನ್ನೆಲೆಯಲ್ಲಿಯೇ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಅನೇಕ ದಿನಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾರ್ಚ್ 2, 2023 ರಂದು ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು ‘ಸದ್ಯದ ಆಯ್ಕೆ ಕ್ರಮ ಸರಿಯಿಲ್ಲ. ಆದ್ದರಿಂದ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ವಿಪಕ್ಷ ನಾಯಕ ಹೀಗೆ ಮೂವರು ಇರುವ ಸಮಿತಿಯು ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕು’ ಎಂದು ತೀರ್ಪು ನೀಡಿತು. ಆದರೆ ಇದಕ್ಕೆ ಸೊಪ್ಪು ಹಾಕದೆ ಮೋದಿ ಸರಕಾರ ತನ್ನ ಬಹುಮತದ ಬಲದಿಂದ ಈ ತೀರ್ಪನ್ನೇ ಕಸದ ಬುಟ್ಟಿಗೆ ಹಾಕಿ ತನಗೆ ಬೇಕಾದಂತೆ ಒಂದು ಕಾನೂನನ್ನು ತಂದಿತು. ಅದರಲ್ಲಿ ಮತ್ತೆ ಪ್ರಧಾನಿ, ವಿಪಕ್ಷ ನಾಯಕ ಮತ್ತು ಪ್ರಧಾನಿ ನೇಮಿಸುವ ಒಬ್ಬರು ಕ್ಯಾಬಿನೆಟ್ ಮಂತ್ರಿ ಇರುತ್ತಾರೆ. ಅಂದರೆ ಮತ್ತೆ ಆಯುಕ್ತರ ನೇಮಕದ ಸಂಪೂರ್ಣ ಅಧಿಕಾರ ಆಡಳಿತ ಪಕ್ಷದ ಬಳಿಯಲ್ಲಿ. ಹೀಗೆ ಯಾರು ಆಯುಕ್ತರಾಗಬೇಕು ಎಂದು ಸರಕಾರವೇ ನಿರ್ಧರಿಸುವಾಗ ಅಲ್ಲಿ ಯೋಗ್ಯತೆಗೆ, ನಿಷ್ಪಕ್ಷಪಾತತೆಗೆ ಜಾಗ ಇರುವುದು ಹೇಗೆ ಸಾಧ್ಯ?
ಆಯುಕ್ತ ಅರುಣ್ ಗೋಯಲ್ ರಾಜಿನಾಮೆ
ಇಂತಹ ಹೊತ್ತಿನಲ್ಲಿ, ಅಂದರೆ ಮೂವರು ಸದಸ್ಯರಿರಬೇಕಾದ ಚುನಾವಣಾ ಆಯೋಗದಲ್ಲಿ ಕೇವಲ ಇಬ್ಬರು ಸದಸ್ಯರಿರುವಾಗಲೇ ಈಗ ಆಯುಕ್ತ ಅರುಣ್ ಗೋಯಲ್ ರಾಜಿನಾಮೆ ನೀಡುವ ಮೂಲಕ ಆಯೋಗ ರಾಜೀವ್ ಕುಮಾರ್ ಅವರ ಏಕಸದಸ್ಯ ಆಯೋಗವಾಗಿದೆ. ಇಬ್ಬರು ಆಯುಕ್ತರ ನೇಮಕಾತಿಗೆ ಇದೀಗ (14.03.2024) ರಂದು ಪ್ರಧಾನಿಯವರು ಹೊರಟಿದ್ದಾರೆ. ಅವರು ಎಂಥವರನ್ನು ನೇಮಕಮಾಡಬಹುದು ಎಂಬುದನ್ನು ಊಹಿಸುವುದು ಕಷ್ಟವೇನೂ ಅಲ್ಲ.
ಇದರ ಅರಿವಿದ್ದೇ, ಸುಪ್ರೀಂ ಕೋರ್ಟ್ ನಲ್ಲಿ ಹಿರಿಯ ವಕೀಲ ಪ್ರಶಾಂತ ಭೂಷಣ್ ಇದನ್ನು ಮತ್ತೆ ಪ್ರಶ್ನಿಸಿದ್ದಾರೆ. ಈ ಮೇಲ್ಮನವಿ ಅರ್ಜಿಯನ್ನು 15.03.2024 ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಇದೀಗ ಬಂದ ಸುದ್ದಿಯಂತೆ ಗ್ಯಾನೇಶ್ ಕುಮಾರ್ ಮತ್ತು ಎಸ್ ಎಸ್ ಸಂಧು ಎಂಬ ಆಯುಕ್ತರನ್ನು ಹೊಸದಾಗಿ ಪ್ರಧಾನಿಯವರು ನೇಮಕ ಮಾಡಿದ್ದಾರೆ . ಮುಂದೆ ಕೋರ್ಟ್ ಏನು ಮಾಡುವುದು ಸಾಧ‍್ಯ ಎಂಬುದನ್ನು ಕಾದು ನೋಡಬೇಕು.
ಒಟ್ಟಿನಲ್ಲಿ, ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗವನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಅದು ಹಿಂದೆಂದೂ ಕಂಡಿರದ ವಿಶ‍್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿದೆ. ಮಾಜಿ ಚುನಾವಣಾ ಆಯುಕ್ತ ಟಿ ಎಸ್ ಕೃಷ್ಣಮೂರ್ತಿಯವರು ಹೇಳುವ ಹಾಗೆ “ತನ್ನ ಸಾಧನೆಯ ಮೂಲಕ ಚುನಾವಣಾ ಆಯೋಗ ತನ್ನ ವಿಶ‍್ವಾಸಾರ್ಹತೆಯನ್ನು ಸಾಬೀತುಪಡಿಸಬೇಕು, ತಾನು ಮುಕ್ತವಾಗಿಲ್ಲ ನ್ಯಾಯಸಮ್ಮತವಾಗಿಲ್ಲ ಎಂಬ ಕಳಂಕವನ್ನು ತೊಡೆಯಲು ಅದು ಹಿಂದೇಟು ಹಾಕಬಾರದು”.
ಶ್ರೀನಿವಾಸ ಕಾರ್ಕಳ
ಚಿಂತಕರು