ಹೊಸದಿಲ್ಲಿ: ಹರಿಯಾಣದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಘಟಿಸುತ್ತಿದ್ದು, ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದು, ಲೋಕಸಭಾ ಚುನಾವಣೆಗಳಲ್ಲಿ ಸೀಟು ಹಂಚಿಕೆ ಕುರಿತಂತೆ ಉಭಯ ಪಕ್ಷಗಳ ನಡುವೆ ಸಮ್ಮತಿ ಏರ್ಪಡದ ಹಿನ್ನೆಲೆಯಲ್ಲಿ ಮೈತ್ರಿಕೂಟದಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು.
90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಹೊಂದಿದ್ದು, ಜೆಜೆಪಿ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಕಿಂಗ್ ಮೇಕರ್ ಆಗಿತ್ತು. ಕಟ್ಟರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸುವ ಎಲ್ಲ ಸಾಧ್ಯತೆಗಳು ಇವೆ.
ಈ ನಡುವೆ ಮನೋಹರ್ ಲಾಲ್ ಕಟ್ಟರ್ ರಾಜೀನಾಮೆ ಕುರಿತಂತೆ ಹಲವು ಬಗೆಯ ವಿಶ್ಲೇಷಣೆ ಕೇಳಿಬರುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅವರು ರಾಜೀನಾಮೆ ನೀಡಿದ್ದಾರೆ. ಕೇಂದ್ರ ರಾಜಕಾರಣಕ್ಕೆ ಬರುವಂತೆ ಬಿಜೆಪಿ ಹೈಕಮಾಂಡ್ ಕಟ್ಟರ್ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ಬಿಜೆಪಿ ಮತ್ತು ಜೆಜೆಪಿ ನಡುವೆ ಸೀಟು ಹೊಂದಾಣಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಉಭಯ ಪಕ್ಷಗಳೂ ಈಗಾಗಲೇ ಘೋಷಣೆ ಮಾಡಿವೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದಿಂದ ಹೊರಬರಲು ಬಿಜೆಪಿ ನಿರ್ಧರಿಸಿದೆ. ದುಶ್ಯಂತ್ ಚೌತಾಲಾ ಅವರ ಜೆಜೆಪಿ ಪಕ್ಷ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ ಎಲ್ಲ ಏಳು ಸ್ಥಾನಗಳಲ್ಲಿ ಸೋಲನ್ನನುಭವಿಸಿತ್ತು. ಇನ್ನೊಂದೆಡೆ ಬಿಜೆಪಿ ಎಲ್ಲ ಹತ್ತು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ತನಗೆ ಎರಡು ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಜೆಜೆಪಿ ಕೋರಿತ್ತಾದರೂ, ಬಿಜೆಪಿ ಈ ಪ್ರಸ್ತಾಪವನ್ನು ತಿರಸ್ಕರಿಸಿ ಒಂದು ಸ್ಥಾನ ಬಿಟ್ಟುಕೊಡುವುದಾಗಿ ಹೇಳಿತ್ತು. ಇದನ್ನು ಒಪ್ಪದ ಜೆಜೆಪಿ ಮುಖಂಡ ದುಶ್ಯಂತ್ ಚೌತಾಲಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ರಾಜೀನಾಮೆಯ ನಂತರ ಮನೋಹರ್ ಲಾಲ್ ಕಟ್ಟರ್ ನಡೆ ಕುತೂಹಲ ಮೂಡಿಸಿದೆ. ಮೈತ್ರಿಕೂಟದಿಂದ ಹೊರಗೆ ಬಂದ ನಂತರ ಕಟ್ಟರ್ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದು, ಈ ಬಾರಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಎರಡು ಭಿನ್ನ ಸಮುದಾಯಗಳು ಡಿಸಿಎಂ ಹುದ್ದೆಗಳನ್ನು ನೀಡಿ ಅದರ ಲಾಭ ಪಡೆಯುವುದು ಬಿಜೆಪಿ ಕಾರ್ಯತಂತ್ರವಾಗಿದೆ.