ಫರಿದಾಬಾದ್ (ಹರಿಯಾಣ): ಬಿಹಾರ ಮೂಲದ ವ್ಯಕ್ತಿಯೊಬ್ಬರು ತನ್ನ ನಾಲ್ವರು ಗಂಡು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮನೋಜ್ ಮಹಾತೊ (45) ಎಂದು ತಿಳಿದು ಬಂದಿದೆ. ಈತ ತನ್ನ ನಾಲ್ವರು ಮಕ್ಕಳಾದ ಪವನ್ (10), ಕರು (9), ಮುರಳಿ (5) ಮತ್ತು ಚೋಟು (3) ಆತ್ಮಹತಯೆಗೆ ಶರಣಾಗಿದ್ದಾರೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಂಪತ್ಯದ ವಿಚಾರಕ್ಕೆ ದಂಪತಿಗಳು ಪದೇ ಪದೇ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ಸಮೀಪದ ಉದ್ಯಾನಕ್ಕೆ ಹೋಗುವುದಾಗಿ ಹೇಳಿ ಮನೋಜ್ ನಾಲ್ವರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಉದ್ಯಾನದ ಬದಲು ರೈಲ್ವೆ ಹಳಿ ಬಳಿಗೆ ಹೋಗಿದ್ದರು. ದಾರಿಯಲ್ಲಿ ಮಕ್ಕಳಿಗೆ ಚಿಪ್ಸ್, ತಂಪು ಪಾನೀಯಗಳನ್ನು ಖರೀದಿಸಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಫ್ಲೈ ಓವರ್ ಅಡಿಯಲ್ಲಿ ರೈಲು ಬರುವುದನ್ನೇ ಕಾಯುತ್ತಿದ್ದ ಮನೋಜ್, ರೈಲು ಬಂದ ತಕ್ಷಣ ನಾಲ್ವರು ಮಕ್ಕಳನ್ನು ಹಿಡಿದು ಹಳಿ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಕಿರುಚಾಡಿದ್ದಾರೆ. ಆದರೆ ಮನೋಜ್ ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಬಿಗಿಯಾಗಿ ಹಿಡಿದುಕೊಂಡು ನಿಂತಿದ್ದಾರೆ. ಮಕ್ಕಳ ಕಿರುಚಾಟ ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಗೋಲ್ಡನ್ ಟೆಂಪಲ್ ಎಕ್ಸ್ ಪ್ರೆಸ್ ರೈಲು ಐವರ ಮೇಲೆ ಹರಿದಿದೆ. ಎಲ್ಲರೂ ಸ್ಥಳದಲ್ಲಯೇ ಮೃತಪಟ್ಟಿದ್ದಾರೆ.