(ಈ ವರೆಗೆ…) ಮೋಹನನ ತಮ್ಮನ ಸುಳ್ಳು ಮಾತುಗಳನ್ನು ನಿಜವೆಂದು ನಂಬಿ ಸಿಟ್ಟಿಗೆದ್ದ ಮೋಹನ ರಾತ್ರೆಯೇ ಹೊರಟು ಬಂದು ಗಂಗೆಯ ಬಸುರು ಜಾರುವಂತೆ ಹೊಡೆಯುತ್ತಾನೆ. ಗೆಳೆಯನ ಮನೆಗೆ ಹೋಗಿ ಕೂತ ಆತನಿಗೆ ಪುಟ್ಟ ಶಿವಲಿಂಗಿಯಿಂದ ಗಂಗೆ ಪಟ್ಟ ಕಷ್ಟಗಳ ಬಗ್ಗೆ ತಿಳಿದು ಪಶ್ಚಾತ್ತಾಪವಾಗುತ್ತದೆ. ಸೀದಾ ಮನೆಗೆ ಬಂದಾಗ ಗಂಗೆಗೆ ನೀರಿಳಿದು ನಿತ್ರಾಣವಾಗಿರುತ್ತದೆ. ತಕ್ಷಣವೇ ಆಕೆಯನ್ನು ಸರಕಾರೀ ಆಸ್ಪತ್ರೆಗೆ ದಾಖಲಿಸುತ್ತಾನೆ. ಗಂಗೆಯ ಮಗು ಉಳಿಯಿತೇ? ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಒಂಬತ್ತನೆಯ ಕಂತು
“ನಿನ್ಗೇನು ಕಾಮನ್ ಸೆನ್ಸ್ ಇಲ್ವೇನೋ ಮೋಹನ ಬೆಳಗ್ಗಿನಿಂದಲೂ ವಾಟರ್ ಡಿಸ್ಚಾರ್ಜ್ ಆಗ್ತಿದೆ ಅಂತಿದ್ದಾಳೆ, ಬೇಗ ಕರ್ಕೊಂಡ್ ಬರೋಕೆ ಏನೋ ಆಗಿತ್ತು ನಿಂಗೆ ದಾಡಿ. ನೋಡು ಮಗು ಆಗ್ಲೇ ಡ್ರೈ ಆಗೋಕೆ ಶುರುವಾಗಿದೆ, ನಮ್ಮ ಪ್ರಯತ್ನ ನಾವು ಮಾಡ್ತೀವಿ ಮಗು ಏನಾದ್ರೂ ಉಳುದ್ರೆ ನಿನ್ನ ಅದೃಷ್ಟ” ಸಂಪಿಗೆ ಕಟ್ಟೆಯ ಗೌರ್ಮೆಂಟ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮೋಹನನ ಕ್ಲಾಸ್ಮೇಟ್ ಸರಳ ಅವನ ವಿರುದ್ಧ ಹರಿಹಾಯ್ದಿದ್ದಳು. ” ಪ್ಲೀಸ್ ಹಾಗನ್ಬೇಡ್ವೆ.. ಕೆಲ್ಸದ್ ಮೇಲೆ ರಾತ್ರಿನೇ ಹೊರಗ್ ಹೋಗಿದ್ದೆ. ಇವ್ಳು ಮನೆಯಲ್ಲಿ ಯಾರಿಗೂ ಹೇಳ್ಕೊಂಡಿಲ್ಲ ಸಂಜೆ ನಾ ಬಂದಾಗ್ಲೇ ಗೊತ್ತಾಗಿದ್ದು ಪ್ಲೀಸ್ ಏನಾದ್ರು ಮಾಡು” ಗೋಗರೆದುಕೊಂಡ ಮೋಹನ. “ಕೇರ್ಲೆಸ್ ಫೆಲೋ ಇನ್ಮುಂದಾದ್ರು ಎಚ್ರವಯ್ಸು” ಅವನ ತಲೆಯ ಮೇಲೊಂದು ಸಲಿಗೆಯ ಪೆಟ್ಟುಹಾಕಿ, ಡಾಕ್ಟರರಿಲ್ಲದ ಆ ವೇಳೆಯಲ್ಲಿ ತಾನೆ ಮುಂದೆ ನಿಂತು ಗಂಗೆಗೆ ನೋವು ಬರುವ ಇಂಜೆಕ್ಷನ್ ಕೊಟ್ಟು ಹೊರ ಬಂದು ಮತ್ತೆ ಮೋಹನನೊಂದಿಗೆ ಮಾತಿಗೆ ಕೂತಳು ಸಿಸ್ಟರ್ ಸರಳ .
“ಅಯ್ಯೋ… ತಿರುಪ್ತಿ ತಿಮ್ಮಪ್ನೇ ನಿನ್ ಮನೆ ಹಾಳಾಗ ನನ್ಗ್ಯಾಕೋ ಇಂತ ನೋವು ಕೊಡ್ತಿದ್ದಿ…” ಕೆಲವೇ ನಿಮಿಷಗಳಲ್ಲಿ ಗಂಗೆಯ ನರಳಾಟ ಆಸ್ಪತ್ರೆಯ ಕೋಣೆಯನ್ನೆಲ್ಲಾ ತುಂಬಿಕೊಂಡಿತ್ತು. ಹೆಂಡತಿಯ ದನಿ ಕೇಳಿ ಎದ್ದೆನೋ ಬಿದ್ದೆನೋ ಎಂದು ವಾರ್ಡಿನತ್ತ ಓಡಿ ಬಂದ ಮೋಹನ, ಭದ್ರವಾಗಿ ಗಂಗೆಯ ಬಾಯಿ ಮುಚ್ಚಿ ಹಿಡಿದು “ಚೂರು ಮ್ಯಾನರ್ಸ್ ಕಲಿ ಗಂಗು; ಒಳ್ಳೆ ಸಣ್ಣ ಹುಡ್ಗಿತರ ಕೂಗಾಡ್ತಿಯಲ್ಲ ನಾಚ್ಕೆ ಆಗಲ್ವ ನಿಂಗೆ…” ಎಂದು ಬಾಯಿ ಮುಚ್ಚಿದ್ದ ಗಂಡನ ಕೈ ಜೋರಾಗಿ ಅತ್ತ ನೂಕಿದ ಗಂಗೆ “ದೊಡ್ ಮನ್ಸ ಮಾಡದ್ನೆಲ್ಲ ಮಾಡಿ ಬಂದ್ಬುಟ್ಟ ಬಾಯ್ಮುಚ್ಚಕೆ; ಸುಮ್ನೆ ಹೋಗಪ್ಪ ಅತ್ಲಾಗಿ..” ಎಂದು ರೇಗಿದಳು. “ನೋಡು, ಹೋಗು ಬಾ, ಅಂತ ಏಕವಚನದಲ್ಲಿ ಮಾತಾಡಿದ್ರೆ ನಾನು ಮನುಷ್ಯ ಆಗಿರಲ್ಲ, ಹದ್ ಮೀರಿ ಮಾತಾಡ್ಬೇಡ ಗಂಗೂ…” ಮೋಹನನ ಕೋಪ ನೆತ್ತಿಗೇರಿತ್ತು. “ಹೂಂ ಇನ್ನೇನು ಬೆಳ್ಬೆಳ್ಗೆನೆ ಹೊಡ್ದು ಅರ್ಧ ಜೀವ ತಗ್ದಿದ್ದಿ ಉಳ್ದಿರೋದು ಇನ್ನೊಂಚೂರು ಅದುನ್ನು ತಗ್ದ್ಬುಡು ಅತ್ತಗಿ ಯಾರ್ ಈ ನೋವು ಅನ್ಬೋಸ್ತರೆ….” ಒಂದೇ ಸಮನೆ ಅರಚಾಡುತ್ತಿದ್ದ ಗಂಗೆ ಇದ್ದಕ್ಕಿದ್ದಂತೆ ಮಂಪರು ಹತ್ತಿದವಳಂತೆ ಕ್ಷಣದಲ್ಲೆ ನಿದ್ದೆಗೆ ಜಾರಿದಳು.
ನಡುವೆ ಬಂದ ಸರಳ ಸಿಸ್ಟರ್ “ಸ್ಟುಪಿಡ್ ಆ ನೋವಿನ ಇಂಟೆನ್ಸಿಟಿ ನಿಂಗೆ ಅರ್ಥ ಆಗೋಕೆ ಸಾಧ್ಯವೇ ಇಲ್ಲ ಕಣೋ. ಫೂಲ್ ತರ ಆಡ್ಬೇಡ, ಪಾಪ ಅವ್ಳ ಸಂಕ್ಟ ಅವಳಿಗೆ.. ನೀನು ಮೊದ್ಲು ಇಲ್ಲಿಂದ ಹೊರಗೋಗು” ಸಲಿಗೆಯಿಂದಲೆ ಮೋಹನನನ್ನು ಗದರಿ ಹೊರ ಕಳುಹಿಸಿದಳು. ಇದ್ದಕ್ಕಿದ್ದಂತೆ ದೆವ್ವ ಹೊಕ್ಕವಳಂತೆ ಮತ್ತೆ ಮೈ ಕೊಡವಿ ನಿಂತ ಗಂಗೆ “ಅಯ್ಯಯಪ್ನೆ…ತಿರಿಕೊತು ತಿರಿಕೊತು ಕನೋ…. ಅಯ್ಯೋ ಬೆವರ್ಸಿ ಮಂಜುನಾಥ್ನೆ ನಿನ್ ಕಣ್ ಇಂಗೋಗವ ನನ್ನ ನೋವು ನಿಂಗ್ ಕಾಣುಸ್ತಿಲ್ವ. ಹಾಳ್ ಮನೆ ದೇವ್ರುಗೊಳೆ ಎಲ್ರು ಎತ್ತಗೋಗಿ ಸತ್ತಿದಿರೋ…”ಎಂದು ದನಿ ಎತ್ತರಿಸಿ ಕೂಗುತ್ತ ಹೊರಗೋಡ ತೊಡಗಿದಳು. ಅಕ್ಕ ಪಕ್ಕದಲ್ಲಿದ್ದ ಹೆಂಗಸರೆಲ್ಲ ಅವಳನ್ನು ಹಿಡಿದು ಒಳಗೆಳೆದು ತಂದು ಹಾಸಿಗೆಯ ಮೇಲೆ ಮಲಗಿಸುವ ಸಾಹಸ ಮಾಡಿದರು.
ಗಂಗೆಯ ಚೀರಾಟ ಕೇಳಲಾರದ ಮುದುಕಿಯೊಬ್ಬಳು “ನಿನ್ ಕುಕ್ರುಸ ಅದೇನರಿ ಕೂಗಾಡ್ತಿ ಒಳ್ಳೆ ಸೀಮೆಗಿಲ್ದೋಳಂಗಾಡ್ಬೇಡ ಎಷ್ಟೊಂದ್ ಹೆಣ್ಮಕ್ಳು ನಿನ್ನಂಗೆ ಹೆರ್ಗೆಗ್ ಬಂದವ್ರೆ.. ಅವ್ರೆಲ್ಲ ನಿನ್ನಂಗೆ ಆಡ್ತಾವ್ರ.. ಸುಮ್ನೆ ಬಾಯ್ಮುಚ್ಕೊಂಡ್ ಬಿದ್ಕೊ..” ಎಂದು ಗದರಿದಳು. ದಡಕ್ಕನೆ ಹಾರಿ ಆ ಮುದುಕಿಯ ಎದುರು ನಿಂತ ಗಂಗೆ ” ಅಯ್ಯೋ.. ಬಿಕ್ನಾಸಿ ಮುದುಕಿ ನೀನ್ ಯಾವಳೆ ನನ್ನ ಬಾಯ್ಮುಚ್ಕೊ ಅನ್ನಕೆ, ನನ್ ನೋವು ನನ್ಗಾಗ್ ಕೂತೈತೆ ಬಂದವ್ಳಿಲ್ಲಿ ನಂದೆಲ್ಲಿಡ್ಲಿ ಅಂತ. ಬಾಯ್ಮುಚ್ಕೊಂಡಿದ್ರೆ ಸರಿ ಇಲ್ಲ ಅಂದ್ರೆ ಹಂಗೆ ಮೆಟ್ರೆ ಅಮುಕ್ ಬುಡ್ತಿನಷ್ಟೆಯ..” ಎನ್ನುತ್ತಿರುವಾಗಲೇ ನಡುವೆ ಬಂದ ಸರಳ ಸಿಸ್ಟರ್ ಎಲ್ಲರ ಬಾಯಿ ಮುಚ್ಚಿಸಿ ಗಂಗೆಯನ್ನು ಓಲೈಸಿ, ಹಾಸಿಗೆಗೆ ತಂದು ಮಲಗಿಸಿದಳು. ಏನೂ ನಡೆದೇ ಇಲ್ಲ ಎನ್ನುವಂತೆ ಮತ್ತೆ ಮತ್ತಿನ ನಿದ್ದೆಗೆ ಜಾರಿದಳು ಗಂಗೆ. ಹೀಗೆ ಮಧ್ಯರಾತ್ರಿಯವರೆಗೂ ತನ್ನೊಂದಿಗೆ ಸುತ್ತಿನವರನ್ನೆಲ್ಲ ಹೈರಾಣ ಗೊಳಿಸಿ ಕೊನೆಗೂ ಸರಿ ರಾತ್ರಿ ಎರಡಕ್ಕೆ ಹೆಣ್ಣುಕೂಸನ್ನು ಹೆತ್ತು ನಿಟ್ಟುಸಿರು ಬಿಟ್ಟಳು. ಬೈಸಿಕೊಂಡ ಮುದುಕಿ ಬೊಚ್ಚು ಬಾಯಿ ಅರಳಿಸಿ ಮಗು ನೋಡುತ್ತಾ ನಿಂತಿದ್ದರೆ ಗಂಗೆ “ತಪ್ಪಾಯ್ತು ಕನಮ್ಮೊ ನೋವ್ ತಡಿನಾರ್ದೆ ಏನೇನೋ ಅಂದ್ಬುಟ್ಟೆ ಎಂದು ನಾಚಿ ಮುಖವನ್ನೆಲ್ಲಾ ಕೆಂಪಾಗಿಸಿ ಕೊಂಡಳು.
ಕಂಕುಳಿಗೊಂದು ಸೀರೆ ಇರುಕಿಕೊಂಡು ತಮ್ಮ ಅಪ್ಪಜ್ಜಣ್ಣನೊಂದಿಗೆ ಜೂರತ್ತಿನಿಂದಲೆ ಕೈಬಿಸಿಕೊಂಡು ಬಂದ ಚಿಕ್ಕ ತಾಯಮ್ಮ, ಗಂಗೆ ಬದಲಿಸಿಕೊಳ್ಳಲೆಂದು ತಂದ ತನ್ನ ಕಾಟನ್ ಸೀರೆಯನ್ನು ನರ್ಸ್ ಮಗು ಸುತ್ತಿಕೊಳ್ಳಲು ಹರಿದಳೆಂದು ಅವಳೊಂದಿಗೆ ಜಗಳ ಕಾಯ್ದು, ಬಂದ ಬಿರುಸಿನಲ್ಲಿಯೇ ದುಮುಗುಡುತ್ತ ಹಿಂದಿರುಗಿದಳು. ಒಂದೇ ಸಮನೆ ಅಳುತ್ತಿದ್ದ ಮಗುವನ್ನು ಹೇಗೆ ಸುಮ್ಮನಿರಿಸುವುದೆಂದು ತೋಚದೆ ಪರದಾಡುತ್ತಿದ್ದ ಗಂಗೆಗೆ ಬಲವಾಗಿ ಬಂದವಳು ಬೈಸಿಕೊಂಡ ಅದೇ ಮುದುಕಿ.
ರಾತ್ರಿ ಇಡೀ ಗಂಗೆಯ ಬಗಲಲ್ಲಿಯೇ ಕೂತು ಮಗುವನ್ನು ಸಂಭಾಳಿಸುತ್ತಿದ್ದ ಆ ಮುದುಕಿ ” ಅಲ್ಲಕನ್ಮಗ ನಿಮ್ ಅತ್ತೆ ಯಾಕಂಗೋದ್ಲು ಹೆಣ್ಣು ಹುಟ್ಟಿದ್ದು ಹಿಡ್ಸಿಲ್ವ ಅವಳಿಗೆ” ಗಂಗೆಯ ಕಿವಿಯಲ್ಲಿ ಮೆಲ್ಲಗೆ ಕೇಳಿದಳು. “ಅಯ್ಯೋ ನಮ್ಮತ್ತೆ ಯಾವಾಗ್ಲೂ ಹಂಗೆಯಾ ಬುಟ್ಟಾಕಮ್ಮ ಅತ್ಲಗಿ” ಗಂಗೆಯ ಉತ್ತರ ಆ ಮುದುಕಿಗೆ ಸಮಾಧಾನವೆನಿಸಲಿಲ್ಲ. ಮತ್ತೆ ಮತ್ತೆ ಅದೇ ವಿಷಯ ಕೆದಕಿ ಕೆದಕಿ ಕೊನೆಗೆ ತಾನೆ ಮುಂದುವರಿದು ” ನನ್ ಸೊಸೆ ಮನೆತುಂಬಾ ಬರೀ ಗಂಡ್ಮಕ್ಳುನೆ ಹೆತ್ಕೊಂಡು ಕೂತವ್ಳೆ ನಿಮ್ಮನೆಯವ್ರುಗೆ ಬ್ಯಾಡ ಅಂದ್ರೆ ಹೇಳು ಈ ಮಗನ ಹಿಂಗೆ ಸೆರ್ಗಿಗೆ ಕಟ್ಕೊಂಡೋಗಿ ರಾಣಿ ಹಂಗ್ ಸಾಕೊತಿನಿ.. ಮುದುಕಿಯ ಮಾತಿನ್ನು ಮುಗಿದಿರಲಿಲ್ಲ ರುದ್ರಿಯಂತಾದ ಗಂಗೆ, “ಆನಾರಿ ನೋವು ತಿಂದ್ ಹೆತ್ತಿದ್ದು ನಿನ್ಗೆ ದಾನಕೊಡಕಮ್ಮ ಏಳಮ್ಮ ಮ್ಯಾಕೆ, ಬಂದ್ಬುಟ್ಲು ದೊಡ್ಡುದಾಗಿ ಸಹಾಯ ಮಾಡೋಳಂಗೆ. ಯಾರಿಗ್ ಬ್ಯಾಡ ಅಂದ್ರು ಕೂಲಿನಾಲಿನಾದ್ರು ಮಾಡಿ ನನ್ ಮಗ ನಾನ್ ಸಾಕೊತಿನಿ ಬುಡ್ತಿರು ಗಾಡಿ ಇಲ್ಲಿಂದ”…ಎಂದ ಗಂಗೆಯ ಪಕ್ಕಕ್ಕೆ ಮಗುವನ್ನು ಕುಕ್ಕಿ ಕೈ ನಟಿಕೆ ಮುರಿಯುತ್ತಾ ಎದ್ದು ಹೋದ ಮುದುಕಿ ಮತ್ತೆ ಅಲ್ಲೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ…
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.