ಖಾಸಗಿ ಫೈನಾನ್ಸ್ ಕಂಪನಿ ಬ್ಯಾಂಕ್‌ ಖಾತೆ ಹ್ಯಾಕ್;‌ ರೂ.48 ಕೋಟಿ ಲಪಟಾಯಿಸಿದ ಸೈಬರ್‌ ಖದೀಮರು

Most read

ಬೆಂಗಳೂರು: ವಿದೇಶಿ ಹ್ಯಾಕರ್‌ ಗಳೊಂದಿಗೆ ಶಾಮೀಲಾಗಿ ಖಾಸಗಿ ಫೈನಾನ್ಸ್ ಕಂಪನಿಯೊಂದರ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ಸುಮಾರು ರೂ.48 ಕೋಟಿ ಹಣವನ್ನು ಲಪಟಾಯಿಸಿದ್ದ ಇಬ್ಬರು  ವಂಚಕರನ್ನು ಸಿಸಿಬಿಯ ಸೈಬರ್‌ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ವಂಚಕರನ್ನು ರಾಜಸ್ತಾನ ಮೂಲದ ಸಂಜಯ್‌ ಪಟೇಲ್‌ (43) ಹಾಗೂ ಬೆಳಗಾವಿಯ ಇಸಾಯಿಲ್‌ ರಶೀದ್‌ ಅತ್ತರ್‌(27) ಎಂದು ಗುರುತಿಸಲಾಗಿದೆ.

ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಜಯ್‌ ಪಟೇಲ್‌ 8ನೇ ತರಗತಿ ಪಾಸ್‌ ಮಾಡಿದ್ದು ಪ್ಲಂಬರ್‌ ಕಲೆಸ ಮಾಡುತ್ತಾನೆ. ಇಸಾಯಿಲ್‌ ರಶೀದ್‌ ಅತ್ತರ್‌ 10ನೇ ತರಗತಿ ವ್ಯಾಸಂಗ ಮಾಡಿದ್ದು, ಡಿಜಿಟಲ್‌ ಮಾರ್ಕೆಟಿಂಗ್‌ ಕೆಲಸ ಮಾಡುತ್ತಿದ್ದ. ಶಿಕ್ಷಣ ಅಪಥ್ಯವಾಗಿದ್ದರೂ ಸೈಬರ್‌ ವಂಚನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು ಎನ್ನುವುದು ವಿಶೇಷ ಎಂದರು.

ಬೆಂಗಳುರಿನ ವಿಸ್ಡಮ್‌ ನೋಡಲ್‌ ಫೈನಾನ್ಸ್ ಕಂಪನಿಯ ಬ್ಯಾಂಕ್‌ ನ ಹಲವು ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹಣ ವರ್ಗಾವಣೆಯಾಗಿದ್ದರ ಬಗ್ಗೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕರೊಬ್ಬರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸೈಬರ್‌ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರೂ ಆರೋಪಿಗಳು ಹಾಂಗ್‌ಕಾಂಗ್‌ ಮೂಲದ ಹ್ಯಾಕರ್‌ ಗಳನ್ನು ಸಂಪರ್ಕಿಸಿ ಅವರ ಸಹಾಯ ಪಡೆದು ವಿಸ್ಡಮ್‌ ಸಂಸ್ಥೆಯ ಬ್ಯಾಂಕ್‌ ಖಾತೆಗಳ ಎಪಿಐಗಳನ್ನು ಬದಲಾಯಿಸಿ ನಕಲಿ ಐಪಿ ವಿಳಾಸಗಳ ಮೂಲಕ ರೂ.48 ಕೋಟಿ ಲಪಟಾಯಿಸಿದ್ದರು.

ಈ ಹಣದ ವ್ಯವಹಾರಗಳು ಕಂಪನಿಯ ಅಧಿಕೃತ ಐಪಿ ವಿಳಾಸಗಳ ಮೂಲಕ ನಡೆದಿಲ್ಲ. ಬದಲಾಗಿ ಭಾರತದ ಹೊರಗಿನ ಐಪಿ ವಿಳಾಸಗಳ ಮೂಲಕ ನಡೆದಿದೆ. ವಿಜ್ಡಮ್‌ ಬ್ಯಾಂಕ್‌ ಖಾತೆಗಳಿಂದ ಮಧ್ಯರಾತ್ರಿಯಲ್ಲಿ 1782 ವ್ಯವಹಾರಗಳ ಮೂಲಕ 656 ವಿವಿಧ ಖಾತೆಗಳಿಗೆ ಸುಮಾರು 47 ಕೋಟಿ ಹಣವನ್ನು ಅನಧಿಕೃತವಾಗಿ ಇತರೆ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಈ ಹಣದಲ್ಲಿ 27.39 ಲಕ್ಷ ಹಣವನ್ನು ವ್ಯಕ್ತಿಯೊಬ್ಬರ ಎಸ್‌ ಬಿಐ ಖಾತಗೆ ವರ್ಗಾವಣೆ ಮಾಡಲಾಗಿತ್ತು. ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ವಂಚಕರು ಯಾರು ಎನ್ನುವುದನ್ನು ಬಾಯಿ ಬಿಟ್ಟಿದ್ದಾನೆ.

More articles

Latest article